ಕಡಲ ತಡಿಯ ನಿಜವಾದ ಹೀರೋಗಳು: ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು!

ಉಡುಪಿ: ಸಮಾಜದ ಕಣ್ಣಿಗೆ ಸದಾ ಕಾಣಿಸಿಕೊಳ್ಳದಿದ್ದರೂ, ಬೋರ್ಗರೆಯುವ ಕಡಲ ಅಲೆಗಳ ನಡುವೆ ಅಪಾಯಕ್ಕೆ ಸಿಲುಕಿದವರ ಪಾಲಿಗೆ ದೇವರಂತೆ ಧಾವಿಸಿ ಜೀವ ಉಳಿಸುವ ಈ ಕಡಲ ಕಾವಲುಗಾರರೇ ನಿಜವಾದ ಹೀರೋಗಳು.ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ತೀರದ ಸೌಂದರ್ಯವನ್ನು ಆಸ್ವಾದಿಸುತ್ತಾರೆ.

ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಾ, ನೀರಿನಲ್ಲಿ ಮಿಂದೆದ್ದು ಸಂಭ್ರಮಿಸುವ ಪ್ರವಾಸಿಗರು ಕೆಲವೊಮ್ಮೆ ಅರಿವಿಲ್ಲದೆ ಅಪಾಯಕ್ಕೆ ಸಿಲುಕುತ್ತಾರೆ. ಅಲೆಗಳ ಸೆಳೆತ, ಸಮುದ್ರದ ಸುಳಿಗಳು ಹಾಗೂ ನೀರಿನ ಆಳದ ಅರಿವಿಲ್ಲದೆ ಜೀವಾಪಾಯ ಎದುರಿಸುವ ಸಂದರ್ಭಗಳೂ ಎದುರಾಗುತ್ತವೆ.

ಇಂತಹ ಸಂಕಷ್ಟದ ಕ್ಷಣಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಸಿಗರ ಜೀವ ರಕ್ಷಣೆಗೆ ಧಾವಿಸುವ ಲೈಫ್‌ಗಾರ್ಡ್‌ಗಳ ಸೇವೆ ನಿಜಕ್ಕೂ ಶ್ಲಾಘನೀಯ. ಪ್ರವಾಸಿಗರ ಸುರಕ್ಷತೆಯನ್ನೇ ತಮ್ಮ ಕರ್ತವ್ಯವೆಂದು ಪರಿಗಣಿಸಿ, ಸದಾ ಕಡಲ ತೀರದಲ್ಲಿ ಕಾವಲು ಕಾಯುವ ಈ ಜೀವ ರಕ್ಷಕರು ಈಗಾಗಲೇ ನೂರಾರು ಜೀವಗಳನ್ನು ಉಳಿಸಿ, ಅನೇಕ ಕುಟುಂಬಗಳ ಪಾಲಿಗೆ ಆಶಾಕಿರಣವಾಗಿದ್ದಾರೆ.

ಇತ್ತೀಚೆಗೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ಐವರು ಪ್ರವಾಸಿಗರ ಪೈಕಿ ಮೂವರನ್ನು ಲೈಫ್‌ಗಾರ್ಡ್‌ಗಳು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಅವರ ಸಾಹಸ, ಕರ್ತವ್ಯನಿಷ್ಠೆ ಹಾಗೂ ಮಾನವೀಯತೆಗೆ ಸಾಕ್ಷಿಯಾಗಿದೆ. ಅ

ಪಾಯದ ಅರಿವಿದ್ದರೂ ಕ್ಷಣಮಾತ್ರ ತಡಮಾಡದೆ ರಕ್ಷಣೆಗೆ ಧಾವಿಸುವ ಅವರ ಧೈರ್ಯಕ್ಕೆ ಎಷ್ಟು ಪ್ರಶಂಸೆ ವ್ಯಕ್ತಪಡಿಸಿದರೂ ಸಾಲದು.ಮಾಧ್ಯಮಗಳ ಬೆಳಕಿಗೆ ಬಾರದೆಯೇ, ತೆರೆಮರೆಯಲ್ಲಿ ನಿರಂತರವಾಗಿ ಜೀವ ಉಳಿಸುವ ಕಾಯಕದಲ್ಲಿ ತೊಡಗಿರುವ ಕಾಪು ಬೀಚ್‌ನ ಈ ಲೈಫ್‌ಗಾರ್ಡ್‌ಗಳು ನಿಜಕ್ಕೂ ಕಡಲ ತಡಿಯ ರಿಯಲ್ ಹೀರೋಗಳು.

ಕಾಪು ಬೀಚ್‌ನಲ್ಲಿ ಪ್ರವಾಸಿಗರ, ಅದರಲ್ಲೂ ಮಕ್ಕಳ ಜೀವ ರಕ್ಷಣೆಗೆ ಶ್ರಮಿಸಿದ ಚಂದ್ರಶೇಖರ್ ಮೆಂಡನ್, ನಿತಿನ್ ಚೌಟ, ಸಂದೇಶ್ ಕರ್ಕೇರ, ಕಾರ್ತಿಕ್ ಸುವರ್ಣ, ರಾಮಣ್ಣ, ಗಣೇಶ್, ಮುಸ್ತಾಕ್, ಸಲೀಂ, ಸಾದಿಕ್, ಬಸವ, ಕಾಂಚಾ, ಆಜಾದ್, ಇಮ್ರಾನ್, ಶರಣ್ ಹಾಗೂ ಸಮೀರ್ ಸೇರಿದಂತೆ ಎಲ್ಲಾ ಜೀವ ರಕ್ಷಕರ ಸೇವೆ ಅಭಿನಂದನಾರ್ಹ.

ಸ್ಥಳೀಯರಾಗಿರುವುದರಿಂದ ಕಡಲಿನ ಸ್ವಭಾವ, ಅಲೆಗಳ ಏರಿಳಿತ, ಸಮುದ್ರದ ಸುಳಿಗಳು ಹಾಗೂ ಅಪಾಯಕಾರಿ ಪ್ರದೇಶಗಳ ಬಗ್ಗೆ ಇವರಿಗಿರುವ ಆಳವಾದ ಜ್ಞಾನ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವರ ಸಮಯಪ್ರಜ್ಞೆ, ಅನುಭವ ಮತ್ತು ಸಾಹಸದಿಂದ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ದುಃಖದಿಂದ ಪಾರಾಗಿವೆ.

ಸಮಾಜದ ಕಣ್ಣಿಗೆ ಕಾಣದಿದ್ದರೂ, ಸಮುದ್ರದ ಅಲೆಗಳ ನಡುವೆ ದೇವರಂತೆ ಧಾವಿಸಿ ಜೀವ ಉಳಿಸುವ ಈ ಕಡಲ ಕಾವಲುಗಾರರ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇವರಿಗೆ ಸಮಾಜದಿಂದ ಮಾತ್ರವಲ್ಲ, ಸರ್ಕಾರದಿಂದಲೂ ಹೆಚ್ಚಿನ ಗೌರವ, ಸೂಕ್ತ ಭದ್ರತೆ, ಅಗತ್ಯ ಸೌಲಭ್ಯಗಳು ಹಾಗೂ ಪ್ರೋತ್ಸಾಹ ದೊರೆಯಬೇಕು.

ಅಪಾಯದ ಅಲೆಗಳ ನಡುವೆ ಜೀವ ಉಳಿಸುವ ಇವರೇ.. ಕಾಪು ಕಡಲ ತೀರದ ನಿಜವಾದ ಹೀರೋಗಳು. ಇವರ ಸೇವೆಗೆ ಹೃದಯಪೂರ್ವಕ ನಮನ ಮತ್ತು ಸಲಾಂ!