ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ದೊಡ್ಡ ಹೊಡೆತ, ಮೆಮೊರಿ ಚಿಪ್‌ಗಳಿಗೆ ತೀವ್ರ ಕೊರತೆ, ದುಬಾರಿಯಾಗುತ್ತಾ ಮೊಬೈಲ್ ಬೆಲೆ?

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂಬರುವ ದಿನಗಳಲ್ಲಿ ಮೊಬೈಲ್ ಬೆಲೆಗಳು ಮತ್ತಷ್ಟು ದುಬಾರಿಯಾಗುವ ಸೂಚನೆ ಸಿಕ್ಕಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ‘ಕೌಂಟರ್‌ಪಾಯಿಂಟ್ ರಿಸರ್ಚ್’ (Counterpoint Research) ಬುಧವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2026ರಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಸಾಗಣೆಯು (Shipments) ವಾರ್ಷಿಕ ಆಧಾರದ ಮೇಲೆ ಶೇ. 13.9 ರಷ್ಟು (ಸುಮಾರು ಶೇ. 14) ಕುಸಿಯುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ನಿರಂತರ ಮೆಮೊರಿ ಚಿಪ್ ಕೊರತೆ, ಹೆಚ್ಚಿದ ಬಿಡಿಭಾಗಗಳ ವೆಚ್ಚ ಮತ್ತು ಗ್ರಾಹಕರ ಕೊಳ್ಳುವ ಶಕ್ತಿ ದುರ್ಬಲವಾಗಿರುವುದರಿಂದ 2027ರಲ್ಲೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಮತ್ತೆ ಶೇ. 6 ರಷ್ಟು ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ.

AI ಅಬ್ಬರದಿಂದ ಮೊಬೈಲ್ ಮೆಮೊರಿ ಚಿಪ್‌ಗಳಿಗೆ ತೀವ್ರ ಕೊರತೆ: ಸೆಮಿಕಂಡಕ್ಟರ್ ತಯಾರಕ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಲಾಭ ತಂದುಕೊಡುವ ಕೃತಕ ಬುದ್ಧಿಮತ್ತೆ (AI) ಮತ್ತು ಸರ್ವರ್ ಅಪ್ಲಿಕೇಶನ್‌ಗಳಿಗೆ ಆದ್ಯತೆ ನೀಡುತ್ತಿರುವುದೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವರದಿ ವಿಶ್ಲೇಷಿಸಿದೆ..

ಉತ್ಪಾದನಾ ವೆಚ್ಚ ಮತ್ತು ಬೆಲೆ ಏರಿಕೆ: ಮೊಬೈಲ್ ಮೆಮೊರಿ ಪೂರೈಕೆಯಲ್ಲಿನ ಈ ಅಸಮತೋಲನವು ಹ್ಯಾಂಡ್‌ಸೆಟ್ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ ಮತ್ತು ವಿಶೇಷವಾಗಿ ಕಡಿಮೆ ಬೆಲೆಯ (Budget) ವಿಭಾಗಗಳಲ್ಲಿ ಚಿಲ್ಲರೆ ಬೆಲೆಗಳನ್ನು (Retail prices) ಏರಿಸಿದೆ.

ಕಂಪನಿಗಳ ಕಾರ್ಯತಂತ್ರ ಬದಲಾವಣೆ: ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುವುದು, ಮೆಮೊರಿ ಕಾನ್ಫಿಗರೇಶನ್‌ಗಳನ್ನು ಕಡಿತಗೊಳಿಸುವುದು, ಕಡಿಮೆ ಲಾಭದ ಮಾಡೆಲ್‌ಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಕಡಿಮೆ ಉತ್ಪನ್ನಗಳು ಹಾಗೂ ಆದ್ಯತೆಯ ಮಾರುಕಟ್ಟೆಗಳ ಮೇಲೆ ಸಂಪನ್ಮೂಲಗಳನ್ನುಕೇಂದ್ರೀಕರಿಸುವ ನಿರ್ಧಾರ ಕೈಗೊಂಡಿವೆ.

2027ರಲ್ಲೂ ತಗ್ಗುವುದಿಲ್ಲ ಮೆಮೊರಿ ಚಿಪ್ ಬಿಕ್ಕಟ್ಟು: ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಧಾನ ವಿಶ್ಲೇಷಕ ಯಾಂಗ್ ವಾಂಗ್ (Yang Wang) ಅವರ ಪ್ರಕಾರ, ಉದ್ಯಮವು ಆರಂಭದಲ್ಲಿ 2026ನೇ ವರ್ಷವು ಈ ಕುಸಿತದ ಕೊನೆಯ ಹಂತವಾಗಿರಬಹುದು ಎಂದು ನಿರೀಕ್ಷಿಸಿತ್ತು, ಆದರೆ ಮೆಮೊರಿ ಮಾರುಕಟ್ಟೆಯ ಪರಿಸ್ಥಿತಿಗಳು ನಿರೀಕ್ಷೆಗಿಂತ ಹೆಚ್ಚು ಬಿಗಿಯಾಗಿವೆ. “ಮೊಬೈಲ್ ಮೆಮೊರಿ ಹಂಚಿಕೆಯನ್ನು ಈಗಲೂ AI ಮತ್ತು ಸರ್ವರ್ ಬೇಡಿಕೆಯು ಕಸಿದುಕೊಳ್ಳುತ್ತಿದೆ. ಇದರ ಪರಿಣಾಮವಾಗಿ 2027ನೇ ವರ್ಷವು ವಿಶೇಷವಾಗಿ ಕಡಿಮೆ ಬೆಲೆಯ ಸಾಧನಗಳು ಮತ್ತು ಬೆಲೆ ಸೂಕ್ಷ್ಮ ಮಾರುಕಟ್ಟೆಗಳಿಗೆ (Price sensitive markets) ಇನ್ನಷ್ಟು ದುರ್ಬಲವಾಗಿರಲಿದೆ” ಎಂದು ವಾಂಗ್ ಹೇಳಿದ್ದಾರೆ.

2027ರ ಆರಂಭದಲ್ಲೂ ಮೊಬೈಲ್ DRAM ಪೂರೈಕೆ ಬಿಗಿಯಾಗಿರಲಿದ್ದು, LPDDR ಮೆಮೊರಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ತಯಾರಕರು ಹೆಚ್ಚು ಲಾಭದಾಯಕ AI-ಸಂಬಂಧಿತ ಅಪ್ಲಿಕೇಶನ್‌ಗಳತ್ತ ಗಮನಹರಿಸಿರುವುದರಿಂದ ಸದ್ಯಕ್ಕೆ ಸ್ಮಾರ್ಟ್‌ಫೋನ್‌ಗಳಿಗೆ ಮೆಮೊರಿ ಪೂರೈಕೆ ಹೆಚ್ಚಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವೇಗದ ಬೆಳವಣಿಗೆಯು ಸ್ಮಾರ್ಟ್‌ಫೋನ್ ಉದ್ಯಮದ ಮೇಲೆ ನೇರ ಮತ್ತು ಅನಿರೀಕ್ಷಿತ ಪರಿಣಾಮ ಬೀರುತ್ತಿದೆ. ಮೆಮೊರಿ ಚಿಪ್‌ಗಳ ಕೊರತೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದು ಕಂಪನಿಗಳಿಗೆ ಮತ್ತು ಗ್ರಾಹಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯಾಗುತ್ತಿರುವುದರಿಂದ 2026 ಮತ್ತು 2027ನೇ ವರ್ಷಗಳು ಸಾಮಾನ್ಯ ಗ್ರಾಹಕರಿಗೆ ಹೊಸ ಮೊಬೈಲ್ ಖರೀದಿಯ ವಿಷಯದಲ್ಲಿ ಸ್ವಲ್ಪ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ.