ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ, ಮಾದಕವಸ್ತುಗಳ ಕಳ್ಳಜಾಲ ಮಟ್ಟ ಹಾಕಿದ ಪೊಲೀಸರು: ರೂ. 3.77 ಕೋಟಿ ಮೌಲ್ಯದ ಚಿನ್ನ, ಡ್ರಗ್ಸ್ ವಶ: ಏಳು ಮಂದಿ ಬಂಧನ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆಯುತ್ತಿದ್ದ ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಭೇದಿಸಿದ್ದಾರೆ. ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ₹3.77 ಕೋಟಿ ಮೌಲ್ಯದ 2.95 ಕೆ.ಜಿ. ವಿದೇಶಿ ಚಿನ್ನ, 1.33 ಕೆ.ಜಿ. ಆಂಫೆಟಮೈನ್ ಮಾದಕವಸ್ತು, ₹73 ಲಕ್ಷ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದು, ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಶೌಚಾಲಯದ ಮೂಲಕ ಚಿನ್ನ ಸಾಗಾಟ: ನವೆಂಬರ್ 23ರಂದು ನಡೆಸಿದ ಕಾರ್ಯಾಚರಣೆಯಲ್ಲಿ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಪೇಸ್ಟ್ ರೂಪದ ಚಿನ್ನವನ್ನು ಹೊರತೆಗೆಯುತ್ತಿದ್ದ ಸಿಬ್ಬಂದಿಯನ್ನು ಡಿಆರ್ಐ ಅಧಿಕಾರಿಗಳು ಹಿಡಿದಿದ್ದಾರೆ. ಈ ಚಿನ್ನವನ್ನು ಕಾಸರಗೋಡು ಮೂಲದ ವ್ಯಕ್ತಿಗೆ ತಲುಪಿಸುವ ಸಂಚು ನಡೆದಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, 1.65 ಕೆ.ಜಿ. ಚಿನ್ನ (₹2 ಕೋಟಿ ಮೌಲ್ಯ), ₹73 ಲಕ್ಷ ನಗದು, ಕಾರು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ದೇಹದೊಳಗೆ ಚಿನ್ನ ಸಾಗಾಟ: ನವೆಂಬರ್ 14ರಂದು ದುಬೈನಿಂದ ಬಂದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಗುದದ್ವಾರದಲ್ಲಿ ಐದು ಕ್ಯಾಪ್ಸೂಲ್‌ಗಳಲ್ಲಿ ಅಡಗಿಸಿಟ್ಟಿದ್ದ 1.306 ಕೆ.ಜಿ. ವಿದೇಶಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ₹1.77 ಕೋಟಿ ಎಂದು ಅಂದಾಜಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಚಿಪ್ಸ್ ಪ್ಯಾಕೆಟ್‌ನಲ್ಲಿ ಡ್ರಗ್ಸ್: ಮಸ್ಕತ್‌ನಿಂದ ಬಂದ ಪ್ರಯಾಣಿಕನ ಚೆಕ್-ಇನ್ ಬ್ಯಾಗ್‌ನಲ್ಲಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ 14 ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ 1.333 ಕೆ.ಜಿ. ಆಂಫೆಟಮೈನ್ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಕಾಸರಗೋಡು ಮೂಲದ ಪ್ರಯಾಣಿಕ ಹಾಗೂ ಕೇರಳದ ಮುನ್ನಾರ್ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಸಿಂಥೆಟಿಕ್ ಮಾದಕವಸ್ತು ಕಳ್ಳಸಾಗಣೆ ಮಾಡಿರುವುದು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ ಎಂದು ಡಿಆರ್ಐ ತಿಳಿಸಿದೆ. ಈ ಕುರಿತು ಡಿಆರ್ಐ ಮಂಗಳೂರು ಪ್ರಾದೇಶಿಕ ಘಟಕದ ಉಪ ನಿರ್ದೇಶಕ ಕಂಕಣಾಲ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.