ಉಡುಪಿ: ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಮತ್ತು ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪವರ್ ಸಂಸ್ಥೆಯ ವತಿಯಿಂದ ‘ಪವರ್ ಫೆಸ್ಟ್ ’27’ ಉತ್ಸವವನ್ನು ಜ. 30 ಮತ್ತು 31ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಹಾಗೂ ಮುದ್ದಣ್ಣ ಮಂಟಪದಲ್ಲಿ ಆಯೋಜಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ವೀಣಾ ಕುಡ್ವ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಗೃಹಾಧಾರಿತ ಉದ್ಯಮಗಳನ್ನು ನಡೆಸುತ್ತಿರುವ ಮಹಿಳೆಯರು, ತಮ್ಮ ಉದ್ಯಮವನ್ನು ವಿಸ್ತರಿಸಲು ಬಯಸುವವರು ಹಾಗೂ ತಮ್ಮ ಹವ್ಯಾಸಗಳನ್ನೇ ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಈ ಉತ್ಸವ ಉತ್ತಮ ವೇದಿಕೆಯಾಗಲಿದೆ ಎಂದರು.
ಪ್ರದರ್ಶಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮೂಲಭೂತ ಪೀಠೋಪಕರಣ, ವಿದ್ಯುತ್ ಸಂಪರ್ಕ ಹಾಗೂ ಬೆಳಕಿನ ವ್ಯವಸ್ಥೆಯುಳ್ಳ ಪ್ರತ್ಯೇಕ ಮಳಿಗೆಗಳನ್ನು ಒದಗಿಸಲಾಗುವುದು. ಉಡುಪಿಯಿಂದ ದೂರದ ಊರುಗಳಿಂದ ಆಗಮಿಸುವ ಮಹಿಳೆಯರಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ಫ್ಲಡ್ಲೈಟ್, ಬಟ್ಟೆ ಬದಲಾಯಿಸುವ ಕೊಠಡಿ ಹಾಗೂ ಭದ್ರತಾ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.
ಮಳಿಗೆಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮಳಿಗೆ ಕಾಯ್ದಿರಿಸಲು 2027ರ ಜ. 5 ಕೊನೆಯ ದಿನವಾಗಿದೆ. ಆಸಕ್ತ ಮಹಿಳಾ ಉದ್ಯಮಿಗಳು ಪ್ರದರ್ಶಕರ ಸಮಿತಿ ಅಧ್ಯಕ್ಷರಾದ ಸುಪ್ರಿಯಾ ಕಾಮತ್ (ಮೊ. 9980152848) ಹಾಗೂ ರಶ್ಮಿ ವಿಜಯೇಂದ್ರ (ಮೊ. 9980550400) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
2009ರಿಂದ ಮಹಿಳಾ ಉದ್ಯಮಿಗಳ ಸಂಘಟನೆ:
2009ರಲ್ಲಿ ಆರಂಭವಾದ ಪವರ್ ಸಂಸ್ಥೆಯು ಮಹಿಳಾ ಉದ್ಯಮಿಗಳು, ಕುಟುಂಬ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಉದಯೋನ್ಮುಖ ಉದ್ಯಮಿಗಳಿಗೆ ಪರಸ್ಪರ ಕಲಿಕೆ, ಅನುಭವ ವಿನಿಮಯ ಮತ್ತು ಉದ್ಯಮ ಸಂಬಂಧಿತ ಸಂಪರ್ಕಗಳಿಗೆ ವೇದಿಕೆ ಕಲ್ಪಿಸುತ್ತಿದೆ.
ಮಹಿಳಾ ಉದ್ಯಮಿಗಳ ಕೌಶಲ್ಯ ವೃದ್ಧಿ ಹಾಗೂ ಅವರ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.
ಇದೀಗ ‘ಪವರ್ ಫೆಸ್ಟ್ ’27’ ಮೂಲಕ ಇನ್ನಷ್ಟು ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸುವ ಉದ್ದೇಶ ಹೊಂದಲಾಗಿದೆ.
ಮಹಿಳಾ ಉದ್ಯಮಿಗಳಿಗೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಅವಕಾಶ ಕಲ್ಪಿಸುವುದರ ಜತೆಗೆ ಖರೀದಿದಾರರ ಸಂಪರ್ಕ, ವ್ಯಾಪಾರ ಜಾಲ ವಿಸ್ತರಣೆ, ಮಾರುಕಟ್ಟೆ, ನಿರ್ವಹಣೆ ಹಾಗೂ ತಾಂತ್ರಿಕ ಜ್ಞಾನದ ವಿನಿಮಯಕ್ಕೂ ಆದ್ಯತೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ತೃಪ್ತಿ ನಾಯಕ್, ಕಾರ್ಯಕ್ರಮ ಕಾರ್ಯದರ್ಶಿ ಸುಜಯಾ ಶೆಟ್ಟಿ, ಜಂಟಿ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ, ಖಜಾಂಚಿ ಪ್ರತಿಭಾ ಆರ್.ವಿ., ಸಲಹೆಗಾರ್ತಿ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್, ಪ್ರದರ್ಶಕರ ಸಮಿತಿ ಅಧ್ಯಕ್ಷೆ ರಶ್ಮಿ ವಿಜಯೇಂದ್ರ ಉಪಸ್ಥಿತರಿದ್ದರು.















