ಬೆಂಗಳೂರು: ಪರಿಸರವಾದಿಗಳ ವಿರೋಧದ ಹಿನ್ನೆಲೆಯಲ್ಲಿ ಲಾಲ್ಬಾಗ್ ಮೂಲಕ ಹಾದುಹೋಗಲಿರುವ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಬದಲಿಗೆ ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಸುತ್ತಿದ್ದು, ಈ ಪೈಕಿ ಒಂದು ಮಾರ್ಗವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ 16.75 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಲಾಲ್ಬಾಗ್ನ ಬಂಡೆಯ ಕೆಳಗೆ ಸುರಂಗ ಹಾದುಹೋಗುವಂತೆ ಹಾಗೂ ಸಸ್ಯೋದ್ಯಾನದೊಳಗೆ ನಿರ್ಗಮನ ಮಾರ್ಗ ನಿರ್ಮಿಸುವ ಪ್ರಸ್ತಾವನೆ ಇತ್ತು.
ಆದರೆ, ಸುರಂಗ ನಿರ್ಮಾಣದಿಂದ ಲಾಲ್ಬಾಗ್ನ ಪ್ರಾಚೀನ ಬಂಡೆ ಹಾಗೂ ಐತಿಹಾಸಿಕ ಕೆಂಪೇಗೌಡ ಕಾವಲು ಗೋಪುರಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. ಸುರಂಗ ಕೊರೆಯುವ ವೇಳೆ ಉಂಟಾಗುವ ಕಂಪನದಿಂದ ಬಂಡೆಯಲ್ಲಿ ಬಿರುಕು ಮೂಡುವುದು ಮತ್ತು ಅಂತರ್ಜಲ ವ್ಯವಸ್ಥೆಯಲ್ಲಿ ಏರುಪೇರಾಗುವ ಸಾಧ್ಯತೆಯ ಬಗ್ಗೆಯೂ ಕಳವಳ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಲಾಲ್ಬಾಗ್ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ಸುರಂಗ ಮಾರ್ಗದ ನಿರ್ಗಮನಕ್ಕಾಗಿ ಲಾಲ್ಬಾಗ್ ಸಿದ್ದಾಪುರ ಅಥವಾ ವಿಲ್ಸನ್ ಗಾರ್ಡನ್ ಪ್ರದೇಶಗಳಲ್ಲಿ ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಎರಡು ಸ್ಥಳಗಳನ್ನು ವೀಕ್ಷಿಸಲಾಗಿದ್ದು, ಈ ಪೈಕಿ ಒಂದನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾರ್ಗ ಬದಲಾವಣೆಯಿಂದ ಯೋಜನೆಯ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನು ಸರಿದೂಗಿಸಲು ಟೋಲ್ ಸಂಗ್ರಹ ಅವಧಿಯನ್ನು ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಯೋಜನೆಯ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಗುತ್ತಿಗೆದಾರರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಲಾಲ್ಬಾಗ್ನ ಪರಿಸರ ಹಾಗೂ ಐತಿಹಾಸಿಕ ಪರಂಪರೆಗೆ ಹಾನಿಯಾಗದಂತೆ ಸುರಂಗ ಮಾರ್ಗ ಯೋಜನೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದು ಪರಿಸರವಾದಿಗಳು ಹಾಗೂ ಬೆಂಗಳೂರಿನ ನಾಗರಿಕರಲ್ಲಿ ನಿರಾಳತೆ ಮೂಡಿಸಿದೆ.















