ಆಂಡ್ರಾಯ್ಡ್ ಬಳಕೆದಾರರಿಗೆ ಡ್ಯುಯಲ್ ಕ್ಯಾಮೆರಾ ಮೋಡ್ ಪರಿಚಯಿಸಿದ ವಾಟ್ಸ್ಆ್ಯಪ್: ಏನಿದೆ ಹೊಸ ಫೀಚರ್?

ಮೆಟಾ ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಡ್ಯುಯಲ್ ಕ್ಯಾಮೆರಾ (Dual Camera) ಮೋಡ್ ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ಏಕಕಾಲದಲ್ಲಿ ಬಳಸಿಕೊಂಡು ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯಬಹುದು.

ಹೊಸ ವೈಶಿಷ್ಟ್ಯದಲ್ಲಿ ಒಂದು ಕ್ಯಾಮೆರಾದ ದೃಶ್ಯವು ಪೂರ್ಣ ಪರದೆಯಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕ್ಯಾಮೆರಾದ ದೃಶ್ಯವು ಚಿಕ್ಕ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಬಳಕೆದಾರರು ತಮ್ಮ ಮುಂದಿರುವ ದೃಶ್ಯವನ್ನು ಸೆರೆಹಿಡಿಯುವ ಜತೆಗೆ ತಮ್ಮ ಮುಖಭಾವ ಹಾಗೂ ಪ್ರತಿಕ್ರಿಯೆಯನ್ನೂ ದಾಖಲಿಸಬಹುದು.

ವಾಟ್ಸ್ಆ್ಯಪ್‌ನ ಹೊಸ ವೈಶಿಷ್ಟ್ಯಗಳನ್ನು ಗಮನಿಸುವ WABetaInfo ಈ ಬಗ್ಗೆ ವರದಿ ಮಾಡಿದ್ದು, ಆಂಡ್ರಾಯ್ಡ್ ಬೀಟಾ ಆವೃತ್ತಿ 2.26.46.9ರಲ್ಲಿ ಈ ಆಯ್ಕೆಯನ್ನು ಗುರುತಿಸಿದೆ. ಪ್ರಸ್ತುತ ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ವಿಸ್ತರಿಸುವ ನಿರೀಕ್ಷೆಯಿದೆ.

ಡ್ಯುಯಲ್ ಕ್ಯಾಮೆರಾ ಮೋಡ್ ಕಾರ್ಯನಿರ್ವಹಿಸುವುದು ಹೇಗೆ?

ವಾಟ್ಸ್ಆ್ಯಪ್‌ನಲ್ಲಿ ಕ್ಯಾಮೆರಾ ತೆರೆದಾಗ ಡ್ಯುಯಲ್ ಕ್ಯಾಮೆರಾ ಮೋಡ್‌ಗಾಗಿ ಪ್ರತ್ಯೇಕ ಬಟನ್ ಕಾಣಿಸಿಕೊಳ್ಳುತ್ತದೆ. ಅದನ್ನು ಒತ್ತಿದರೆ ಈ ವೈಶಿಷ್ಟ್ಯ ಸಕ್ರಿಯಗೊಳ್ಳುತ್ತದೆ.

ಆರಂಭದಲ್ಲಿ ಹಿಂಭಾಗದ ಕ್ಯಾಮೆರಾದ ದೃಶ್ಯವು ಪೂರ್ಣ ಪರದೆಯಲ್ಲಿ ಕಾಣಿಸಿಕೊಂಡರೆ, ಮುಂಭಾಗದ ಕ್ಯಾಮೆರಾದ ದೃಶ್ಯವು ಮೇಲಿನ ಬಲ ಮೂಲೆಯಲ್ಲಿ ಚಿಕ್ಕ ಆಯತಾಕಾರದ ಫ್ರೇಮ್‌ನಲ್ಲಿ ಕಾಣಿಸುತ್ತದೆ. ರೊಟೇಟ್ ಬಟನ್ ಬಳಸುವ ಮೂಲಕ ಎರಡೂ ಕ್ಯಾಮೆರಾಗಳ ದೃಶ್ಯಗಳ ಸ್ಥಾನವನ್ನು ಬದಲಾಯಿಸಬಹುದು.

ಚಿಕ್ಕ ಫ್ರೇಮ್ ಅನ್ನು ಬೆರಳಿನಿಂದ ಎಳೆದು ಪರದೆಯ ಯಾವುದೇ ಭಾಗದಲ್ಲಿ ಇರಿಸುವ ಸೌಲಭ್ಯವೂ ಇದೆ. ವಿಡಿಯೋ ಕರೆಗಳಲ್ಲಿ ಕಾಣಿಸುವ ಚಿಕ್ಕ ವಿಂಡೋವನ್ನು ಸ್ಥಳಾಂತರಿಸುವ ರೀತಿಯಲ್ಲೇ ಇದನ್ನು ಬಳಸಬಹುದು.

ಫೋಟೋ ತೆಗೆದಾಗ ಎರಡೂ ಕ್ಯಾಮೆರಾಗಳ ದೃಶ್ಯಗಳು ಒಂದೇ ಚಿತ್ರವಾಗಿ ಸಂಯೋಜಿಸಲ್ಪಡುತ್ತವೆ. ವಿಡಿಯೋ ರೆಕಾರ್ಡ್ ಮಾಡುವಾಗ ಎರಡೂ ಕ್ಯಾಮೆರಾಗಳು ಏಕಕಾಲದಲ್ಲಿ ದೃಶ್ಯಗಳನ್ನು ಸೆರೆಹಿಡಿದು ಒಂದೇ ವಿಡಿಯೋ ಕ್ಲಿಪ್ ಆಗಿ ಉಳಿಸುತ್ತವೆ.

ಚಾಟ್, ಗ್ರೂಪ್ ಮತ್ತು ಸ್ಟೇಟಸ್‌ನಲ್ಲೂ ಹಂಚಿಕೊಳ್ಳಬಹುದು

ಡ್ಯುಯಲ್ ಕ್ಯಾಮೆರಾ ಮೂಲಕ ಸೆರೆಹಿಡಿದ ಫೋಟೋ ಹಾಗೂ ವಿಡಿಯೋಗಳನ್ನು ವೈಯಕ್ತಿಕ ಚಾಟ್, ಗ್ರೂಪ್, ಚಾನೆಲ್ ಅಥವಾ ಸ್ಟೇಟಸ್ ಅಪ್‌ಡೇಟ್‌ಗಳಲ್ಲಿ ಹಂಚಿಕೊಳ್ಳಬಹುದು. ರೆಕಾರ್ಡಿಂಗ್ ಬಳಿಕ ಕ್ಯಾಪ್ಶನ್ ಸೇರಿಸುವುದು, ಡ್ರಾಯಿಂಗ್ ಎಡಿಟರ್ ಮೂಲಕ ಸಂಪಾದಿಸುವುದು ಅಥವಾ ನೇರವಾಗಿ ಕಳುಹಿಸುವ ಆಯ್ಕೆಗಳೂ ಲಭ್ಯವಿರುತ್ತವೆ.

ಪ್ರಸ್ತುತ ಈ ವೈಶಿಷ್ಟ್ಯವು ಆಯ್ದ ಬೀಟಾ ಬಳಕೆದಾರರಿಗೆ ಮಾತ್ರ ಬಿಡುಗಡೆಯಾಗುತ್ತಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಇತ್ತೀಚಿನ ಅಪ್‌ಡೇಟ್ ಇನ್‌ಸ್ಟಾಲ್ ಮಾಡಿಕೊಂಡಿರುವ ಕೆಲವು ಬಳಕೆದಾರರಿಗೆ ಈಗಾಗಲೇ ಈ ಆಯ್ಕೆ ಕಾಣಿಸುತ್ತಿದೆ. ಆದರೆ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಅಧಿಕೃತವಾಗಿ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ವಾಟ್ಸ್ಆ್ಯಪ್ ಇನ್ನೂ ಪ್ರಕಟಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಬೀರಿಯಲ್ (BeReal) ಮಾದರಿಯ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನವನ್ನು ವಾಟ್ಸ್ಆ್ಯಪ್‌ನಲ್ಲೂ ಪರಿಚಯಿಸಿರುವುದು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಪ್ರವಾಸದ ದೃಶ್ಯಗಳು, ವಿಶೇಷ ಕ್ಷಣಗಳು ಹಾಗೂ ಕಾರ್ಯಕ್ರಮಗಳನ್ನು ಸೆರೆಹಿಡಿಯುವಾಗ ತಮ್ಮ ಪ್ರತಿಕ್ರಿಯೆಯನ್ನೂ ಏಕಕಾಲದಲ್ಲಿ ದಾಖಲಿಸಿ ಹಂಚಿಕೊಳ್ಳಲು ಈ ವೈಶಿಷ್ಟ್ಯ ನೆರವಾಗಲಿದೆ.