ಮತ್ತೆ ಸುಂಕದ ಶಾಕ್ ನೀಡಿದ ಟ್ರಂಪ್, ಭಾರತ ಸೇರಿದಂತೆ 16 ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ವಾಷಿಂಗ್ಟನ್: ಭಾರತ ಸೇರಿದಂತೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟ ಸೇರಿದಂತೆ ಹಲವು ಪ್ರಮುಖ ಆರ್ಥಿಕತೆಗಳ ಮೇಲೆ ಅಮೆರಿಕ ಹೊಸ ಸುಂಕ ವಿಧಿಸುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಹೊಸ ಸುಂಕ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದರಿಂದ ಭಾರತ ಮತ್ತೊಮ್ಮೆ ಅಮೆರಿಕದ ವ್ಯಾಪಾರ ಸುಂಕದ ಬಿಸಿ ಎದುರಿಸುವ ಸಾಧ್ಯತೆಯಿದೆ.

ಭಾರತ, ಚೀನಾ, ಯುರೋಪಿಯನ್ ಒಕ್ಕೂಟ ಸೇರಿದಂತೆ ಒಟ್ಟು 16 ರಾಷ್ಟ್ರಗಳ ಕೈಗಾರಿಕಾ ಸಬ್ಸಿಡಿ ಹಾಗೂ ಸರ್ಕಾರದ ಬೆಂಬಲ ನೀತಿಗಳ ಕುರಿತು ಮಾರ್ಚ್ 11ರಂದು 1974ರ ಅಮೆರಿಕದ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ. ಈ ರಾಷ್ಟ್ರಗಳ ವ್ಯಾಪಾರ ಪದ್ಧತಿಗಳು ಅನ್ಯಾಯದಿಂದ ಕೂಡಿವೆ ಎಂದು ಟ್ರಂಪ್ ಆಡಳಿತ ಆರೋಪಿಸಿದೆ.

ಈ ದೇಶಗಳಲ್ಲಿನ ಸರ್ಕಾರಿ ಸಬ್ಸಿಡಿ ಹಾಗೂ ಇತರ ಬೆಂಬಲ ನೀತಿಗಳು ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವನ್ನು ಅಗತ್ಯಕ್ಕಿಂತ ಹೆಚ್ಚಿಸಿವೆ. ಇದರಿಂದಾಗಿ ಉತ್ಪಾದಕರು ಜಾಗತಿಕ ಮಾರುಕಟ್ಟೆಗೆ ಕಡಿಮೆ ಬೆಲೆಯ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುತ್ತಿದ್ದಾರೆ. ಪರಿಣಾಮವಾಗಿ ಅಮೆರಿಕದ ಸ್ಥಳೀಯ ಉತ್ಪಾದಕರು ಸ್ಪರ್ಧೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂಬುದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರ ಆರೋಪವಾಗಿದೆ.

ಈ ತನಿಖೆಯ ಆಧಾರದ ಮೇಲೆ ಅಂತಿಮವಾಗಿ ಸುಂಕ ವಿಧಿಸಬೇಕೇ ಮತ್ತು ವಿಧಿಸುವುದಾದರೆ ಎಷ್ಟು ಪ್ರಮಾಣದಲ್ಲಿ ವಿಧಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸುಂಕದ ಅಂತಿಮ ದರ ಇನ್ನೂ ಪ್ರಕಟವಾಗಿಲ್ಲ. 2025ರಲ್ಲಿ ಅಧ್ಯಕ್ಷ ಟ್ರಂಪ್ ನಿಗದಿಪಡಿಸಿದ್ದ ಮಾದರಿಯಲ್ಲೇ ಹೊಸ ಸುಂಕಗಳನ್ನು ವಿಧಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ, ಅಮೆರಿಕದ ಹೊಸ ವ್ಯಾಪಾರ ನೀತಿಯ ಮುಂದಿನ ನಿರ್ಧಾರಗಳ ಮೇಲೆ ಭಾರತ ಸೇರಿದಂತೆ ತನಿಖೆಗೆ ಒಳಪಟ್ಟ 16 ಆರ್ಥಿಕತೆಗಳ ಗಮನ ನೆಟ್ಟಿದೆ.