ಸೌದಿ ಅರೇಬಿಯಾದ ಗೋಪುರದ ಮೇಲೆ ಹೌತಿ ದಾಳಿ – ಇಬ್ಬರು ಭಾರತೀಯರು ಸೇರಿ 11 ಮಂದಿಗೆ ಗಾಯ

ರಿಯಾದ್: ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್‌ನ (Riyadh) ಫೈನಾನ್ಶಿಯಲ್ ಸೆಂಟರ್‌ನಲ್ಲಿರುವ (Financial District) ಗೋಪುರವೊಂದನ್ನು ಗುರಿಯಾಗಿಸಿಕೊಂಡು ಯೆಮೆನ್‌ನ ಹೌತಿ ಬಂಡುಕೋರರು ದಾಳಿ ನಡೆಸಿದ್ದು, ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ (ನ.24) ಕಿಂಗ್ ಅಬ್ದುಲ್ಲಾ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ನಲ್ಲಿರುವ ಗೋಪುರದ ಮೇಲೆ ನಡೆಸಿದ ದಾಳಿಯನ್ನು “ಭಯೋತ್ಪಾದಕ ದಾಳಿ” ಎಂದು ಸೌದಿ ಅರೇಬಿಯಾದ ಸಿವಿಲ್ ಡಿಫೆನ್ಸ್ ಬಣ್ಣಿಸಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಣ್ಣಿಸಿದೆ.

ಸೌದಿ ಸಿವಿಲ್ ಡಿಫೆನ್ಸ್ ಮಾಹಿತಿ ಪ್ರಕಾರ, ಗಾಯಗೊಂಡವರಲ್ಲಿ ಇಬ್ಬರು ಸೌದಿ ಪ್ರಜೆಗಳು, ಇಬ್ಬರು ಭಾರತೀಯರು, ಮೂವರು ನೇಪಾಳಿ ಪ್ರಜೆಗಳು ಮತ್ತು ನಾಲ್ವರು ಈಜಿಪ್ಟ್ ಪ್ರಜೆಗಳು ಸೇರಿದ್ದಾರೆ. ಘಟನೆ ನಡೆದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ತುರ್ತು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಹೆಜ್ಜೆಗಳನ್ನು ಇಟ್ಟಿದ್ದಾರೆ ಎಂದು ತಿಳಿಸಿದೆ.

ಇಬ್ಬರು ಭಾರತೀಯರಿಗೆ ಗಾಯ: ರಾಯಭಾರ ಕಚೇರಿ ಸ್ಪಷ್ಟನೆ
ಈ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಗಾಯಗೊಂಡಿರುವುದನ್ನು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಖಚಿತಪಡಿಸಿದೆ. ಇಂದು ರಿಯಾದ್‌ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಗಾಯಗೊಂಡಿರುವುದು ತಿಳಿದುಬಂದಿದೆ. ರಾಯಭಾರ ಕಚೇರಿಯು ಈ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದು, ಗಾಯಾಳುಗಳು ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ತಿಳಿಸಿದೆ. ಇದೇ ವೇಳೆ, ಕೊಲ್ಲಿ ರಾಷ್ಟ್ರದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ರಾಯಭಾರ ಕಚೇರಿ ಸೂಚಿಸಿದೆ.

ಯೆಮೆನ್‌ನಲ್ಲಿರುವ ಸೌದಿ ನೇತೃತ್ವದ ಒಕ್ಕೂಟದ ಅಧಿಕೃತ ವಕ್ತಾರರು ಸಹ ಫೈನಾನ್ಶಿಯಲ್ ಸೆಂಟರ್‌ನ ಗೋಪುರವೊಂದನ್ನು ಗುರಿಯಾಗಿಸಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯೆಮೆನ್‌ನ ಅಲ್-ಹುದೈದಾ ಗವರ್ನರೇಟ್‌ನಲ್ಲಿ ಸೌದಿ ನೇತೃತ್ವದ ಒಕ್ಕೂಟ ವಾಯುದಾಳಿ ನಡೆಸಿದೆ ಎಂಬ ಆರೋಪಗಳ ಬೆನ್ನಲ್ಲೇ ಸೌದಿ ಅರೇಬಿಯಾ ಮತ್ತು ಹೌತಿ ಬಂಡುಕೋರರ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.