ಮತ್ತೆ ಭಾರತಕ್ಕೆ ಟ್ರಂಪ್‌ ಶಾಕ್?‌; 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆ

ವಾಷಿಂಗ್ಟನ್‌: ಅಮೆರಿಕದಿಂದ ಹೊಸ ಸುಂಕದ (US Tarrifs) ಅಲೆಯನ್ನು ಶೀಘ್ರದಲ್ಲೇ ಎದುರಿಸಬಹುದಾದ ಹಲವು ರಾಷ್ಟ್ರಗಳಲ್ಲಿ ಭಾರತವೂ (India) ಸೇರಿದೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಹೊಸ ಸುಂಕಗಳು ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟ ಮತ್ತು ಇತರ ಹಲವಾರು ಪ್ರಮುಖ ಆರ್ಥಿಕತೆಗಳನ್ನು ಗುರಿಯಾಗಿಸುವ ನಿರೀಕ್ಷೆಯಿದೆ.

ಭಾರತ, ಚೀನಾ, ಯುರೋಪಿಯನ್ ಒಕ್ಕೂಟ ಮತ್ತು ಇತರ 13 ರಾಷ್ಟ್ರಗಳ ಕೈಗಾರಿಕಾ ಸಬ್ಸಿಡಿಗಳ ತನಿಖೆಯನ್ನು ಮಾರ್ಚ್ 11 ರಂದು 1974 ರ ವ್ಯಾಪಾರ ಕಾನೂನಿನ ಸೆಕ್ಷನ್ 301 ರ ಅಡಿಯಲ್ಲಿ ತೆರೆಯಲಾಯಿತು. ಇದು ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಟ್ರಂಪ್‌ ಕರೆದಿದ್ದಾರೆ. ಹೀಗಾಗಿ, ರಾಷ್ಟ್ರಗಳ ಮೇಲೆ ಸುಂಕಗಳನ್ನು ವಿಧಿಸಬಹುದು ಎನ್ನಲಾಗಿದೆ.

ಆ ಸಬ್ಸಿಡಿಗಳು ಮತ್ತು ಇತರ ಸರ್ಕಾರಿ ಬೆಂಬಲವು ಈ ರಾಷ್ಟ್ರಗಳಲ್ಲಿ ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯವನ್ನು ಸೃಷ್ಟಿಸಿದೆ. ಇದರಿಂದಾಗಿ ಅವರ ಸಂಸ್ಥೆಗಳು ಜಾಗತಿಕ ಮಾರುಕಟ್ಟೆಗಳನ್ನು ಅಗ್ಗದ ಸರಕುಗಳಿಂದ ತುಂಬಿಸಲು ಅವಕಾಶ ಮಾಡಿಕೊಟ್ಟಿವೆ. ಇದು ಅಮೆರಿಕದ ಉತ್ಪಾದಕರನ್ನು ದುರ್ಬಲಗೊಳಿಸಿದೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮೀಸನ್ ಗ್ರೀರ್ ತಿಳಿಸಿದ್ದಾರೆ.

ಅಂತಿಮ ಸುಂಕ ದರಗಳು ಸ್ಪಷ್ಟವಾಗಿಲ್ಲ. ಅಧ್ಯಕ್ಷರು 2025 ರಲ್ಲಿ ನಿಗದಿಪಡಿಸಿದಂತೆಯೇ ಸುಂಕಗಳನ್ನು ವಿಧಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಟ್ರಂಪ್‌ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.