ಇಸ್ರೇಲ್‌ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಗೂಢ ಸಾವು: ಕೊಲೆ ಶಂಕೆ, ತನಿಖೆಗೆ ಕುಟುಂಬಸ್ಥರ ಆಗ್ರಹ

ಮಂಗಳೂರು: ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಮೃತಪಟ್ಟವರು. ಒಂದೂವರೆ ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಅವರು, ಆರಂಭದಲ್ಲಿ ಟೆಲ್ ಅವೀವ್‌ನ ಇಸ್ರೇಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಝರೆತ್ ಸಮೀಪದ ನೊಫ್ ಹಗಲಿಲ್‌ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಗೆ ಸೇರಿದ್ದರು.

ಅ.16ರಂದು ರಾತ್ರಿ 8.49ಕ್ಕೆ ಶಡ್ರಕ್ ತಮ್ಮ ಪತ್ನಿಗೆ ಕೊನೆಯದಾಗಿ ಸಂದೇಶ ಕಳುಹಿಸಿದ್ದರು. ಅದಕ್ಕೂ ಮೊದಲು ಕುಟುಂಬಸ್ಥರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಬಳಿಕ ಅವರು ಕುಟುಂಬದವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ.

ಶಡ್ರಕ್ ನಾಪತ್ತೆಯಾಗಿರುವ ಬಗ್ಗೆ ಆತಂಕಗೊಂಡ ಕುಟುಂಬಸ್ಥರು ಅ.21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲದೆ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿ, ಶಡ್ರಕ್ ಅವರನ್ನು ಪತ್ತೆಹಚ್ಚಲು ನೆರವಾಗುವಂತೆ ಕೋರಿದ್ದರು.

ಶಡ್ರಕ್ ನಾಪತ್ತೆಯಾದ ಸುಮಾರು ಒಂದು ವಾರದ ಬಳಿಕ ಅವರು ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿತ್ತು. ಇದೀಗ ಒಂದು ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿದ್ದು, ನ.24ರಂದು ರಾತ್ರಿ ತಾಯ್ನಾಡಿಗೆ ತಲುಪಿದೆ.

ವಿದೇಶದಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ ಶಡ್ರಕ್ ಅವರ ನಿಗೂಢ ಸಾವು ಕುಟುಂಬಸ್ಥರನ್ನು ತೀವ್ರ ಆಘಾತಕ್ಕೀಡುಮಾಡಿದೆ. ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಇದು ಸಹಜ ಸಾವಲ್ಲ, ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಇಸ್ರೇಲ್‌ನಲ್ಲಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಸಾವಿನ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.