ಉಡುಪಿ: ಕೆಳಕಬ್ಯಾಡಿಯ ಶ್ರೀ ಅಂಬಾ ಭವಾನಿ ದೇವಸ್ಥಾನದ ಸುತ್ತುಪೌಳಿ ನಿರ್ಮಾಣ ಕಾರ್ಯಕ್ಕೆ ನವೆಂಬರ್ 22ರಂದು ಶಿಲಾನ್ಯಾಸ ನೆರವೇರಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಕೆಳಕಬ್ಯಾಡಿಯಲ್ಲಿರುವ ಪುರಾತನ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಂಡು ಬರಲಾಗುತ್ತಿದೆ. ಇದೀಗ ದೇವಸ್ಥಾನಕ್ಕೆ ಸುತ್ತುಪೌಳಿ ನಿರ್ಮಿಸುವ ಸಂಕಲ್ಪ ಕಾರ್ಯರೂಪಕ್ಕೆ ಬರುತ್ತಿದ್ದು, ಹಲವು ವರ್ಷಗಳಿಂದ ಈ ಯೋಜನೆಯ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ಶಿಲಾನ್ಯಾಸ ಕಾರ್ಯಕ್ರಮ ಮಹತ್ವದ ಕ್ಷಣವಾಗಲಿದೆ ಎಂದರು.
ನವೆಂಬರ್ 22ರ ಬೆಳಿಗ್ಗೆ 9ರಿಂದ 10.30ರವರೆಗೆ ಮಹಿಳಾ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸುತ್ತುಪೌಳಿ ನಿರ್ಮಾಣದ ಶಿಲಾನ್ಯಾಸಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಬಂಟ್ವಾಳ ತಾಲೂಕಿನ ಓಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯಹಸ್ತದಿಂದ ಶಿಲಾನ್ಯಾಸ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಮಾಜಿ ಸಚಿವರು, ರಾಜಕೀಯ ಮುಖಂಡರು, ವಿವಿಧ ದೈವ-ದೇವಸ್ಥಾನಗಳ ಧರ್ಮದರ್ಶಿಗಳು ಹಾಗೂ ಊರಿನ ಹಿರಿಯರು ಗೌರವ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ನಾಯಕ್, ಕೋಶಾಧಿಕಾರಿ ಸುಕೇಶ್ ಎಸ್. ನಾಯ್ಕ್ ಉಪಸ್ಥಿತರಿದ್ದರು.















