ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ 34ನೇ ಘಟಿಕೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು 10,277 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ಇವರಲ್ಲಿ 207 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ (ಪಿಎಚ್ಡಿ) ಪದವಿ ಪ್ರದಾನ ಮಾಡಲಾಗುವುದು.
ನವೆಂಬರ್ 19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಾಲ್ಕು ದಿನಗಳ ಕಾಲ ಘಟಿಕೋತ್ಸವ ನಡೆಯಲಿದ್ದು, 7,694 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಬೆಂಗಳೂರು ಕ್ಯಾಂಪಸ್ನಲ್ಲಿ ನವೆಂಬರ್ 28 ಮತ್ತು 29ರಂದು ನಡೆಯುವ ಘಟಿಕೋತ್ಸವದಲ್ಲಿ 2,583 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಮಣಿಪಾಲ ಮಾಹೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 19ರಂದು ಕೋನೆ ಎಲಿವೇಟರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗೋಸೈನ್, ನ.20ರಂದು ಹಿಟಾಚಿ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ಹಾಗೂ ಮುಖ್ಯ ಪರಿವರ್ತನಾ ಅಧಿಕಾರಿ ಕೊಜಿ ತ್ಸುಬೋಟಾ, ನ.21ರಂದು ಬ್ರಿಟನ್ನ ಲ್ಯಾಂಕಸ್ಟರ್ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಔದ್ಯಮಿಕ ವಿಭಾಗದ ಸಹಕುಲಪತಿ ಪ್ರೊ. ಜೋ ರ್ಯಾಕಾಫ್ಟ್-ಮಲೋನ್ ಹಾಗೂ ನ.22ರಂದು ಕೆನಡಾದ ನ್ಯೂಬ್ರನ್ಸ್ವಿಕ್ ವಿಶ್ವವಿದ್ಯಾಲಯದ ಅಧ್ಯಕ್ಷೆ ಮತ್ತು ಕುಲಪತಿ ಡಾ. ಕ್ಯಾಥಿ ವಿಲ್ಸನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೆಂಗಳೂರು ಕ್ಯಾಂಪಸ್ನ ಘಟಿಕೋತ್ಸವದಲ್ಲಿ ನ.28ರಂದು ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ನ ಸಾರ್ವಜನಿಕ ವಲಯ ಹಾಗೂ ವಾಣಿಜ್ಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ತ್ರಿದೀಬ್ ರಾಯ್ ಮತ್ತು ನ.29ರಂದು ಫಿಲಿಪ್ಸ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಆರ್. ಶೇಷ ಮುಖ್ಯ ಅತಿಥಿಗಳಾಗಿರಲಿದ್ದಾರೆ ಎಂದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ಪ್ರತಿದಿನ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಘಟಿಕೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿವೆ. ಪ್ರಾರ್ಥನೆ, ಮುಖ್ಯ ಅತಿಥಿಗಳ ಭಾಷಣ, ಪದವಿ ಪ್ರದಾನ ಹಾಗೂ ವಿಶ್ವವಿದ್ಯಾಲಯದ ಪ್ರಮುಖರ ಅಭಿನಂದನಾ ಸಂದೇಶ ಕಾರ್ಯಕ್ರಮದ ಭಾಗವಾಗಿರಲಿವೆ.
400ಕ್ಕೂ ಹೆಚ್ಚು ಅಧ್ಯಯನ ವಿಭಾಗಗಳುಮಾಹೆಯು ಕೇಂದ್ರ ಸರ್ಕಾರದಿಂದ ‘ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾಗಿದ್ದು, ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೆಡ್ಪುರ ಮತ್ತು ದುಬೈ ಕ್ಯಾಂಪಸ್ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ವಿಜ್ಞಾನ, ವೈದ್ಯಕೀಯ, ಆಡಳಿತ, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನ ಸೇರಿದಂತೆ 400ಕ್ಕೂ ಹೆಚ್ಚು ವಿಶೇಷ ಅಧ್ಯಯನ ವಿಭಾಗಗಳನ್ನು ಹೊಂದಿದೆ.
ಶೈಕ್ಷಣಿಕ ಸಾಧನೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನಾ ಕ್ಷೇತ್ರದ ಕೊಡುಗೆಗಳಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಾಹೆಗೆ 2020ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ‘ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿದೆ. ಎನ್ಐಆರ್ಎಫ್ 2025ರ ಶ್ರೇಯಾಂಕದಲ್ಲಿ ಮಾಹೆ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ತಿಳಿಸಿದರು.















