ಮಂಗಳೂರು: ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ನ.16) ಸಂಜೆ ನಡೆದಿದೆ. ಟೇಕ್ಆಫ್ಗೆ ಕೇವಲ 100 ಮೀಟರ್ ಬಾಕಿ ಇರುವಾಗ ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನಕ್ಕೆ ತುರ್ತು ಬ್ರೇಕ್ ಹಾಕಿ ರನ್ವೇಯಲ್ಲೇ ನಿಲ್ಲಿಸಿದ್ದಾರೆ.
229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಇದ್ದ ಇಂಡಿಗೋ ವಿಮಾನವು ಸಂಜೆ 6.10ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿತ್ತು. ರನ್ವೇಯಲ್ಲಿ ವೇಗವಾಗಿ ಸಾಗುತ್ತಿದ್ದ ವಿಮಾನ ಟೇಕ್ಆಫ್ ಆಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಇರುವಾಗ ಅದರ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಿದ್ದಾರೆ. ಈ ವೇಳೆ ವಿಮಾನದ ಚಕ್ರವೊಂದು ಒಡೆದಿರುವುದಾಗಿ ತಿಳಿದುಬಂದಿದೆ.
ಘಟನೆಯ ಬಳಿಕ ವಿಮಾನವನ್ನು ಮತ್ತೆ ಬೇಗೆ ವಾಪಸ್ ತರಲಾಗಿದ್ದು, ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಅಗತ್ಯ ನೆರವು ಒದಗಿಸಿದ್ದಾರೆ. ರಾತ್ರಿ 11.05ಕ್ಕೆ ಬದಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾತ್ರಿ 11.30ಕ್ಕೆ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳಿದೆ.
ತಾಂತ್ರಿಕ ಪರಿಶೀಲನೆ ಬಳಿಕ ಎಒಜಿ ಘೋಷಣೆ
ಘಟನೆಯ ಬಳಿಕ ವಿಮಾನಯಾನ ಸಂಸ್ಥೆಯ ಎಂಜಿನಿಯರಿಂಗ್ ತಂಡ ವಿಮಾನವನ್ನು ಸುದೀರ್ಘ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದೆ. ಬಳಿಕ ವಿಮಾನವನ್ನು ಎಒಜಿ (Aircraft on Ground) ಎಂದು ಘೋಷಿಸಲಾಗಿದೆ. ಅಂದರೆ, ಅಗತ್ಯ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ವಿಮಾನ ಹಾರಾಟ ನಡೆಸುವಂತಿಲ್ಲ.
ಪೈಲಟ್ ತಾಂತ್ರಿಕ ದೋಷವನ್ನು ಗುರುತಿಸಿದ ಕೂಡಲೇ ಟೇಕ್ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಒಂದು ವೇಳೆ ದೋಷವನ್ನು ನಿರ್ಲಕ್ಷಿಸಿ ವಿಮಾನ ಟೇಕ್ಆಫ್ ಮಾಡಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಪೈಲಟ್ ತಕ್ಷಣ ಕೈಗೊಂಡ ನಿರ್ಧಾರದಿಂದ ಸಂಭವನೀಯ ದುರಂತ ತಪ್ಪಿದಂತಾಗಿದೆ. ಬದಲಿ ವಿಮಾನದ ವ್ಯವಸ್ಥೆಯಾಗುವವರೆಗೆ ಕೆಲವು ಪ್ರಯಾಣಿಕರಿಗೆ ಸ್ಥಳೀಯ ಹೋಟೆಲ್ಗಳಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿದ್ದರು ಹಲವು ಗಣ್ಯರು
ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ ಹಾಗೂ ಓರ್ವ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಮೂಲಕ ವಿದೇಶಗಳಿಗೆ ತೆರಳಬೇಕಿದ್ದ ಹಲವು ಪ್ರಯಾಣಿಕರೂ ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.















