ಮೂಡುಬಿದಿರೆ: ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿವಾಹಿತ ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ತೆರಳದೆ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಗದಗದವರಾಗಿರುವ, ಇದೀಗ ಮಾರ್ಪಾಡಿ ಗ್ರಾಮದ ಕಡದಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಭುವನೇಶ್ವರಿ (28) ನಾಪತ್ತೆಯಾಗಿರುವ ಮಹಿಳೆ.
ಭುವನೇಶ್ವರಿ ಅವರು ಮೂಡುಬಿದಿರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ನ.10ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಪತಿಯು ಪತ್ನಿಯನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಹೋಗಿದ್ದರು. ಪ್ರತಿದಿನ ಸಂಜೆ 6:30ಕ್ಕೆ ಮನೆಗೆ ಮರಳುತ್ತಿದ್ದ ಭುವನೇಶ್ವರಿ ಅವರು, ಅಂದು ರಾತ್ರಿ 8 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗದ ಕಾರಣ ಪತ್ತೆ ಮಾಡಿಕೊಡುವಂತೆ ಭುವನೇಶ್ವರಿ ಅವರ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರ ಚಹರೆ ಮತ್ತು ವಿವರಗಳು: ಭುವನೇಶ್ವರಿ (28) ಅವರು 4.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಉರುಟು ಮುಖ, ಗುಂಗುರು ಕೂದಲು, ಸಪೂರ ಶರೀರ ಹೊಂದಿದ್ದು, ಇವರು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಮೂಡುಬಿದಿರೆ ಪೊಲೀಸ್ ಠಾಣೆಯ 08258-236333 ಅಥವಾ ಪೊಲೀಸ್ ಆಯುಕ್ತರ ಕಚೇರಿ (ಮಂಗಳೂರು) 0824-2220801, 2220800 ದೂರವಾಣಿ ಸಂಖ್ಯೆಗಳಿಗೆ ತಕ್ಷಣ ಮಾಹಿತಿ ನೀಡುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ















