ಉಡುಪಿ: ಮಂಚಿ ಕುಮೇರಿ ಪ್ರದೇಶದಲ್ಲಿ ಕಳೆದ ಹಲವು ಸಮಯದಿಂದ ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪದೇಪದೆ ವಿದ್ಯುತ್ ವ್ಯತ್ಯಯವಾಗುತ್ತಿರುವುದಲ್ಲದೆ, ವೋಲ್ಟೇಜ್ ಏರಿಳಿತದಿಂದಾಗಿ ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಈ ಪ್ರದೇಶಕ್ಕೆ ಉದ್ಯಾವರ ಹಾಗೂ ಉಡುಪಿ ಕಡೆಯಿಂದ ಎರಡು ವಿದ್ಯುತ್ ಲೈನ್ಗಳ ಸಂಪರ್ಕವಿದ್ದರೂ, ಕೆಲವು ಮನೆಗಳಿಗೆ ಉದ್ಯಾವರ ಫೀಡರ್ನಿಂದಲೇ ವಿದ್ಯುತ್ ಪೂರೈಕೆಯಾಗುತ್ತಿದೆ. ಉದ್ಯಾವರ ಫೀಡರ್ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದರೂ ಮಂಚಿ ಕುಮೇರಿ ಭಾಗದ ಈ ಮನೆಗಳಿಗೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಸ್ಥಳೀಯರು ಪದೇಪದೆ ಸಮಸ್ಯೆ ಎದುರಿಸುವಂತಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಅಥವಾ ಮಣಿಪಾಲ ವಿದ್ಯುತ್ ಲೈನ್ಗೆ ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಈವರೆಗೆ ಯಾವುದೇ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದ್ದು, ಮಳೆಗಾಲ ಮುಗಿದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇದರೊಂದಿಗೆ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆ ಹಾಗೂ ಬೇರುಗಳು ಆವರಿಸಿರುವುದರಿಂದ ವೋಲ್ಟೇಜ್ ಏರಿಳಿತ ಉಂಟಾಗುತ್ತಿದೆ. ಪರಿಣಾಮವಾಗಿ ಹಲವು ಮನೆಗಳ ಫ್ಯಾನ್, ಲೈಟ್, ಫ್ರಿಡ್ಜ್ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳು ಪದೇಪದೆ ಹಾಳಾಗುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದರೂ ನಿರೀಕ್ಷಿತ ಕ್ರಮ ಕೈಗೊಳ್ಳದಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮಂಚಿ ಕುಮೇರಿ ಭಾಗದ ವಿದ್ಯುತ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ಅಥವಾ ಮಣಿಪಾಲ ಲೈನ್ಗೆ ಪರ್ಯಾಯ ಸಂಪರ್ಕ ಕಲ್ಪಿಸುವುದರ ಜತೆಗೆ ವಿದ್ಯುತ್ ಮಾರ್ಗದಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ, ಸುಸ್ಥಿರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.















