ಬಂಟ್ವಾಳ: ರಾಜ್ಯದ ವಿವಿಧೆಡೆ ನಡೆದಿರುವ ವಿಗ್ರಹ ಕಳ್ಳತನ ಹಾಗೂ ಪ್ರಾಚೀನ ಐತಿಹಾಸಿಕ ವಸ್ತುಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಬಾಳೇಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಲಿಯಾಸ್ ಮಧುಸೂದನ ಭಟ್ಟ ಅವರ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಪೊಳಲಿ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿರುವ ಮೂಲ ವಿಗ್ರಹಗಳು ಹಾಗೂ ಅಪಾರ ಐತಿಹಾಸಿಕ ಮತ್ತು ಪುರಾತನ ಮೌಲ್ಯ ಹೊಂದಿರುವ ವಸ್ತುಗಳನ್ನು ಕಳವು ಮಾಡಲಾಗಿದೆ ಅಥವಾ ಮಾರಾಟ ಮಾಡಲಾಗಿದೆ ಎಂಬ ಶಂಕೆಯನ್ನು ಸ್ಥಳೀಯ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇದಲ್ಲದೆ, ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೇವಸ್ಥಾನದ ಆವರಣದಲ್ಲಿ ಬಾಳೇಕುದ್ರು ಶ್ರೀಮಠದ ಹೆಸರಿನ ಫಲಕ ಅಳವಡಿಸಿರುವುದಕ್ಕೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಮೂಲ ವಿಗ್ರಹಗಳು, ಪುರಾತನ ವಸ್ತುಗಳು ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದೇವಸ್ಥಾನದ ಐತಿಹಾಸಿಕ ಪರಂಪರೆ, ಪುರಾತನ ವಿಗ್ರಹಗಳು ಹಾಗೂ ಸಾರ್ವಜನಿಕ ಧಾರ್ಮಿಕ ಆಸ್ತಿಗಳ ರಕ್ಷಣೆಗೆ ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದರು. ಮಠದಲ್ಲಿ ಪೂಜಿಸಲ್ಪಟ್ಟ ಪುರಾತನ ವಿಗ್ರಹಗಳನ್ನು ಬೆಂಗಳೂರಿನಲ್ಲಿ ಮಾರಿದ್ದಾರೆ ಎನ್ನುವ ಆರೋಪವೂ ಸ್ವಾಮೀಜಿ ಮೇಲಿದೆ.















