ಮಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ 1.15 ಕೋಟಿ ರೂ. ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಐವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಅಕ್ಟೋಬರ್ 28ರಂದು ಮಂಗಳೂರಿನ ಲಾಲ್ಬಾಗ್ನಲ್ಲಿ ಈ ಘಟನೆ ನಡೆದಿತ್ತು. ಬಂಧಿತರನ್ನು ಕಾಪು ಮೂಲದ ರಿಯಾಜ್, ಹಳಿಯಾಳದ ನಸ್ರುಲ್ಲಾ ಖಾನ್, ಕಾರವಾರದ ನಿತ್ಯಾನಂದ, ಫರಂಗಿಪೇಟೆಯ ಖಾಲಿದ್ ಹಾಗೂ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ್ ಎಂದು ಗುರುತಿಸಲಾಗಿದೆ. ಕಾರವಾರದ ಗಣೇಶ್ ಕೋಳಂಕರ ಎಂಬಾತ ತಲೆಮರೆಸಿಕೊಂಡಿರುವ ಆರೋಪಿ.
ದಾವಣಗೆರೆಯ ನಿವಾಸಿ ಸತ್ಯನಾರಾಯಣ ಅವರು ತಮ್ಮ ಮಾಲೀಕ ನಾಗರಾಜ್ ಶೆಟ್ ಅವರ ಸೂಚನೆಯಂತೆ ಮಂಗಳೂರಿಗೆ ಬಂದಿದ್ದರು. ನಾಗರಾಜ್ ಶೆಟ್ ಅವರು ದಾವಣಗೆರೆಯಲ್ಲಿ ಅಡಿಕೆ ತೋಟ ಹಾಗೂ ಆಭರಣ ಮಳಿಗೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.
ಸತ್ಯನಾರಾಯಣ ಅವರು ಲಾಲ್ಬಾಗ್ನಲ್ಲಿ ಬಸ್ನಿಂದ ಇಳಿದ ಸ್ವಲ್ಪ ಸಮಯದಲ್ಲೇ ನಾಲ್ವರು ಅಪರಿಚಿತರು ಅವರನ್ನು ಅಪಹರಿಸಿದ್ದರು. ಬಳಿಕ ಆರೋಪಿಗಳು ಸುಮಾರು ಒಂದು ಗಂಟೆಗಳ ಕಾಲ ಕಾರಿನಲ್ಲಿ ನಗರದ ವಿವಿಧೆಡೆ ಸುತ್ತಾಡಿಸಿ, ಕಾವೂರು ಗುಡ್ಡೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು.
ಅಲ್ಲಿ ಸತ್ಯನಾರಾಯಣ ಅವರ ಬಳಿಯಿದ್ದ 1.15 ಕೋಟಿ ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಅವರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸತ್ಯನಾರಾಯಣ ನೀಡಿದ ದೂರಿನ ಆಧಾರದ ಮೇಲೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಗಣೇಶ್ ಕೋಳಂಕರನ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.















