ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಭದ್ರತಾ ಪರಿಸ್ಥಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPO) ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಈ ಸಂದಿಗ್ಧ ಪರಿಸ್ಥಿತಿ ನಡುವೆ ಕುಲ್ಗಾಮ್ ಜಿಲ್ಲೆಯಲ್ಲಿ CRPF ಚೆಕ್ಪೋಸ್ಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು CRPF ಸಿಬ್ಬಂದಿ ಗಾಯಗೊಂಡಿದ್ದಾರೆ.
ಇಬ್ಬರು ಪೊಲೀಸರು ಮಿಸ್ಸಿಂಗ್
ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ವಿಶೇಷ ಪೊಲೀಸ್ ಅಧಿಕಾರಿಗಳನ್ನ 57 ವರ್ಷದ ಬಾಬಿ ಚಂದ್ ಮತ್ತು 45 ವರ್ಷದ ರಶ್ಪಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ (SOG)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಿಯಾರ್ ಶಿಬಿರದಿಂದ ಧರ್ನಾ-ಮರ್ವಾ ಪ್ರದೇಶದಲ್ಲಿರುವ ಸೇನಾ ಶಿಬಿರಕ್ಕೆ ತೆರಳುತ್ತಿದ್ದ ವೇಳೆ ಇಬ್ಬರೂ ನಾಪತ್ತೆಯಾಗಿದ್ದಾರೆ.
ಆರಂಭದಲ್ಲಿ ಅವರ ಮೊಬೈಲ್ ಫೋನ್ಗಳು ಸಂಪರ್ಕಕ್ಕೆ ಸಿಕ್ಕಿದ್ದರೂ, ಬಳಿಕ ಸ್ವಿಚ್ ಆಫ್ ಆಗಿವೆ ಎಂದು ತಿಳಿದುಬಂದಿದೆ. ಇನ್ನೂ, ಸ್ಥಳೀಯರು ಗುಂಡಿನ ಸದ್ದು ಕೇಳಿರುವುದಾಗಿ ವರದಿಯಾಗಿದ್ದು, ನಾಪತ್ತೆಯ ಹಿಂದೆ ಉಗ್ರರ ಕೈವಾಡವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ದೃಢೀಕರಣ ಲಭ್ಯವಾಗಿಲ್ಲ. ಸದ್ಯ ನಾಪತ್ತೆಯಾದ ಅಧಿಕಾರಿಗಳ ಪತ್ತೆಗಾಗಿ ಪೊಲೀಸರು, ಸೇನೆಯ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡಗಾಡು ಪ್ರದೇಶಗಳು ಹಾಗೂ ದಟ್ಟ ಅರಣ್ಯಗಳಲ್ಲಿ ತೀವ್ರ ಶೋಧ ಮುಂದುವರಿದಿದೆ.
ಕುಲ್ಗಾಮ್ನಲ್ಲಿ CRPF ಚೆಕ್ಪೋಸ್ಟ್ ಮೇಲೆ ಗುಂಡಿನ ದಾಳಿ
ಇನ್ನೊಂದೆಡೆ, ಕುಲ್ಗಾಮ್ ಜಿಲ್ಲೆಯಲ್ಲಿ CRPF ಚೆಕ್ಪೋಸ್ಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು CRPF ಸಿಬ್ಬಂದಿಗೆ ಗುಂಡೇಟು ತಗುಲಿದ್ದು, ಗಾಯಾಳುಗಳನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮೂವರ ಪೈಕಿ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಯೋಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ 92 ಬೇಸ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ದಾಳಿ ನಡೆಸಿದ ಇಬ್ಬರು ಉಗ್ರರು ಗುಂಡಿನ ದಾಳಿಯ ಬಳಿಕ ಅರಣ್ಯ ಪ್ರದೇಶದ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅವರಿಗಾಗಿ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ. ಇದೇ ವೇಳೆ, ದಾಳಿ ನಡೆಸಿದ ಬಳಿಕ ಉಗ್ರರು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.















