ಕುಂದಾಪುರದಲ್ಲಿ ಎಚ್‌ಐವಿ/ಏಡ್ಸ್ ಜಾಗೃತಿ ಅಭಿಯಾನ: ನರ್ಸಿಂಗ್ ವಿದ್ಯಾರ್ಥಿಗಳಿಂದ ಬೀದಿ ನಾಟಕ ಮತ್ತು ಫ್ಲ್ಯಾಶ್‌ಮಾಬ್

ಕುಂದಾಪುರ: ಎಚ್‌ಐವಿ/ಏಡ್ಸ್ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಕುಂದಾಪುರದಲ್ಲಿ ಫ್ಲ್ಯಾಶ್‌ಮಾಬ್ ಮತ್ತು ಬೀದಿ ನಾಟಕದ ಮೂಲಕ ವಿಶೇಷ ಜಾಗೃತಿ ಅಭಿಯಾನ ನಡೆಸಿದರು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ರೋಟರಿ ಕ್ಲಬ್ ಸನ್‌ರೈಸ್ ಹಾಗೂ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 7ರಂದು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ವಹಿಸಿದ್ದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞರಾದ ಡಾ. ಚಂದ್ರ ಮರಕಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಜಯಕರ್ ಶೆಟ್ಟಿ, ರೋಟರಿ ಕ್ಲಬ್ ಸನ್‌ರೈಸ್‌ನ ಶ್ರೀಮತಿ ಪೂರ್ಣಿಮಾ ರವಿಶಂಕರ್, ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಉಪಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ. ಎಸ್. ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಶ್ರೀಮತಿ ನಳಿನಾಕ್ಷಿ ಉಪಸ್ಥಿತರಿದ್ದರು.

ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ಉಪನ್ಯಾಸಕಿ ಶ್ರೀಮತಿ ಸಂಧ್ಯಾ ಅವರು ಸ್ವಾಗತ ಭಾಷಣ ಮಾಡಿದರು.

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸ ಬಸ್ ನಿಲ್ದಾಣ, ಪುರಸಭೆ ಹಾಗೂ ಸಂತೆ ಮಾರುಕಟ್ಟೆಗಳಲ್ಲಿ ಫ್ಲ್ಯಾಶ್‌ಮಾಬ್ ಮತ್ತು ಬೀದಿ ನಾಟಕ ಪ್ರದರ್ಶಿಸಿದರು. ಈ ಮೂಲಕ ಎಚ್‌ಐವಿ ಹರಡುವ ವಿಧಾನಗಳು, ತಡೆಗಟ್ಟುವ ಕ್ರಮಗಳು, ಆರಂಭಿಕ ಪರೀಕ್ಷೆ, ಚಿಕಿತ್ಸೆ ಹಾಗೂ ಸಮಾಲೋಚನೆಯ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಎಚ್‌ಐವಿ ಸೋಂಕಿನ ಕುರಿತು ಇರುವ ತಪ್ಪು ಕಲ್ಪನೆಗಳು, ಭಯ ಮತ್ತು ತಾರತಮ್ಯವನ್ನು ಹೋಗಲಾಡಿಸುವುದು, ಸೋಂಕಿತರ ಬಗ್ಗೆ ಮಾನವೀಯ ಮತ್ತು ಸಹಾನುಭೂತಿಯ ಮನೋಭಾವ ಬೆಳೆಸುವುದು ಹಾಗೂ ಸಮಗ್ರ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳ (ICTC) ಸೇವೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

ವಿದ್ಯಾರ್ಥಿಗಳ ಈ ಸೃಜನಾತ್ಮಕ ಜಾಗೃತಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಮುದಾಯ ಆರೋಗ್ಯ ಜಾಗೃತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ವಿಶೇಷತೆಯಾಗಿತ್ತು.