ದೀಪಾವಳಿ: ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕು ಮೂಡಿಸುವ ಹಬ್ಬ

‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’ ಎಂಬ ಉಪನಿಷತ್ತಿನ ಸಂದೇಶವೇ ದೀಪಾವಳಿಯ ಆಚರಣೆಯ ಹಿಂದಿರುವ ಆಧ್ಯಾತ್ಮಿಕ ಆಶಯವನ್ನು ಸಾರುತ್ತದೆ. ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಬೇಕು ಎಂಬುದು ಇದರ ಅರ್ಥ. ಮನುಷ್ಯನ ಮನಸ್ಸು, ಬುದ್ಧಿ, ಆಚಾರ ಮತ್ತು ವಿಚಾರಗಳಿಗೆ ಅಂಟಿಕೊಂಡಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದೇ ಈ ಹಬ್ಬದ ನಿಜವಾದ ಸಂದೇಶವಾಗಿದೆ.

ಋತುಗಳ ಬದಲಾವಣೆಯೊಂದಿಗೆ ಬೆಸೆದುಕೊಂಡ ಹಬ್ಬ

ದೀಪಾವಳಿ ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ವಿಶೇಷ ಋತು ಉತ್ಸವವೂ ಹೌದು. ಸನಾತನ ಧರ್ಮದ ಬಹುತೇಕ ಹಬ್ಬಗಳು ಪ್ರಕೃತಿಯಲ್ಲಿನ ಬದಲಾವಣೆ, ಋತುಮಾನ, ಮಾಸ ಹಾಗೂ ತಿಥಿಗಳಿಗೆ ಅನುಗುಣವಾಗಿ ರೂಪುಗೊಂಡಿವೆ. ಹೀಗಾಗಿ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ನಾವು ಯಾವುದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಆಯಾ ಪರಿಸರದಲ್ಲಿ ಪ್ರಕೃತಿಯ ಮೂಲಕ ವ್ಯಕ್ತವಾಗುವ ಬದಲಾವಣೆಗಳನ್ನು ಭಗವಂತನ ಕೃಪೆ ಹಾಗೂ ಲಕ್ಷ್ಮಿಯ ಲೀಲಾವಿಲಾಸವೆಂದು ಭಾವಿಸಿ ಸಂಭ್ರಮಿಸುತ್ತೇವೆ. ಪ್ರಕೃತಿಯ ಸಮೃದ್ಧಿಯಲ್ಲಿಯೇ ಲಕ್ಷ್ಮಿಯನ್ನು ಕಾಣುವ ಭಾರತೀಯ ಸಂಸ್ಕೃತಿಯ ವಿಶೇಷತೆ ಇಲ್ಲಿದೆ.

VARANASI, UTTAR PRADESH, INDIA – 2023/11/27: Devotees light earthen oil lamps on the occasion of Dev Deepavali. Dev Deepavali, also known as Diwali of the Gods, is a festival celebrated on Karthik Purnima, which falls 15 days after Diwali. Dev Deepavali is the biggest Light Festival in India, where devotees decorate the river bank of the Ganges with millions of Lamps as part of the festival.

ದೀಪದ ಬೆಳಕಿನಲ್ಲಿದೆ ಬದುಕಿನ ಸಂದೇಶ

ದೀಪದ ಬೆಳಕು ಸುತ್ತಲಿನ ಎಲ್ಲ ದಿಕ್ಕುಗಳಿಗೂ ಹರಡುತ್ತದೆ. ಆದರೆ ದೀಪದ ಜ್ವಾಲೆ ಸದಾ ಮೇಲ್ಮುಖವಾಗಿರುತ್ತದೆ. ಇದು ಮನುಷ್ಯನ ಬದುಕಿಗೂ ಒಂದು ಮಹತ್ವದ ಸಂದೇಶ ನೀಡುತ್ತದೆ. ದೀಪ ಬೆಳಗಿಸುವ ಮನುಷ್ಯನ ಮನಸ್ಸು ಕೂಡ ಸದಾ ಉನ್ನತಿಯ ಕಡೆಗೆ ಸಾಗಬೇಕು. ತನ್ನ ಇತಿಮಿತಿಗಳನ್ನು ಮೀರಿ ಉತ್ತಮ ವಿಚಾರ, ನಡೆನುಡಿ ಹಾಗೂ ಆದರ್ಶಗಳ ಮೂಲಕ ಬದುಕಿನಲ್ಲಿ ಮೇಲೇರಬೇಕು ಎಂಬುದನ್ನು ದೀಪದ ಜ್ವಾಲೆ ಸಂಕೇತಿಸುತ್ತದೆ.

ದೀಪವು ತಾನು ಉರಿದುಕೊಂಡು ಸುತ್ತಲಿನವರಿಗೆ ಬೆಳಕು ನೀಡುವಂತೆ ಮನುಷ್ಯನೂ ತನ್ನ ಬದುಕಿನಲ್ಲಿ ತ್ಯಾಗ, ಸೇವೆ ಹಾಗೂ ಸಹಕಾರದ ಗುಣಗಳನ್ನು ಬೆಳೆಸಿಕೊಂಡು ಇತರರ ಜೀವನಕ್ಕೆ ಬೆಳಕಾಗಬೇಕು. ತನ್ನಿಂದ ಸಾಧ್ಯವಾದಷ್ಟು ಸಮಾಜಕ್ಕೆ ಒಳಿತು ಮಾಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು ಎಂಬ ಉದಾತ್ತ ಸಂದೇಶವೂ ದೀಪಾವಳಿಯ ಆಚರಣೆಯಲ್ಲಿದೆ.

ವೇದಕಾಲದ ಯಕ್ಷರಾತ್ರಿ ಪರಿಕಲ್ಪನೆ

ವೇದಕಾಲದಲ್ಲಿ ಹಬ್ಬಗಳೆಲ್ಲವೂ ಪ್ರಕೃತಿ ಹಾಗೂ ಋತುಮಾನಗಳಿಗೆ ಸಂಬಂಧಿಸಿದ ಉತ್ಸವಗಳಾಗಿದ್ದವು. ದೀಪಾವಳಿಯನ್ನು ಯಕ್ಷರಾತ್ರಿ ಎಂದೂ ಕರೆಯಲಾಗುತ್ತದೆ. ವೇದಗಳಲ್ಲಿನ ಶ್ರೀಸೂಕ್ತದಲ್ಲಿ ಉಲ್ಲೇಖವಾಗಿರುವ ‘ಮಣಿನಾಸಹ’ ಎಂಬ ಪದವನ್ನು ಆಧರಿಸಿ ಲಕ್ಷ್ಮಿಯನ್ನು ಯಕ್ಷರೊಂದಿಗೆ ಸಂಬಂಧ ಕಲ್ಪಿಸಿ ವಿವರಿಸಲಾಗುತ್ತದೆ. ಯಕ್ಷರು ಸಂಪತ್ತು ನೀಡುವವರು ಎಂಬ ನಂಬಿಕೆಯಿದ್ದು, ಯಕ್ಷರ ಅಧಿಪತಿ ಕುಬೇರನಾಗಿದ್ದಾನೆ. ಹೀಗಾಗಿ ರಾತ್ರಿ ಸಮಯದಲ್ಲಿ ಕುಬೇರ ಹಾಗೂ ಅವರ ತಂಗಿಯಾದ ಲಕ್ಷ್ಮಿಯನ್ನು ಆರಾಧಿಸಿ, ಧನಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುವಂತೆ ಪ್ರಾರ್ಥಿಸುವ ಸಂಪ್ರದಾಯವಿದೆ ಎಂದು ವಿಭು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ, ಸಂಸ್ಕೃತ ಮತ್ತು ಸಂಗೀತ ವಿದುಷಿ, ತರಬೇತಿ ತಜ್ಞೆ ಹಾಗೂ ಸಂಸ್ಕೃತಿ ಚಿಂತಕಿ ಡಾ. ಆರತಿ ವಿ.ಬಿ. ವಿವರಿಸುತ್ತಾರೆ.