ಬಾಳೆಕುದ್ರು ಮಠಕ್ಕೆ ಬೀಗ ಹಾಕಿ ಶ್ರೀಗಳು ನಾಪತ್ತೆ; ಮೂರ್ತಿಗಳ ಮಾರಾಟ ಆರೋಪ

ಉಡುಪಿ: ಹಂಗಾರಕಟ್ಟೆಯ ಐತಿಹಾಸಿಕ ಬಾಳೆಕುದ್ರು ಮಠಕ್ಕೆ ಬೀಗ ಹಾಕಿ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ತೆರಳಿರುವ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಬುಧವಾರ ಸಂಜೆಯ ಬಳಿಕ ಮಠಕ್ಕೆ ಬೀಗ ಹಾಕಲಾಗಿದ್ದು, ಮಠದ ಮೂರ್ತಿಗಳನ್ನು ಮಾರಾಟ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದೆ.

ಮಠದ ಆಡಳಿತ ಹಾಗೂ ಸಂಪ್ರದಾಯಗಳ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ವಿವಾದ ಉಂಟಾಗಿತ್ತು. ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿಯ ಸದಸ್ಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಠದಲ್ಲಿ ಹಿಂದಿನ ನೃಸಿಂಹಾಶ್ರಮ ಸ್ವಾಮೀಜಿಯವರ ಆಡಳಿತಾವಧಿಯಲ್ಲಿ ದೇವಸ್ಥಾನದ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ, ಈಗಿನ ಸ್ವಾಮೀಜಿಯವರ ಅವಧಿಯಲ್ಲಿ ಈ ಬದಲಾವಣೆಗಳು ಮಿತಿಮೀರಿದ್ದು, ಮಠದ ಸಂಪ್ರದಾಯ ಹಾಗೂ ಪರಂಪರೆಗೆ ವಿರುದ್ಧವಾಗಿ ವಿವಿಧ ಕಾರ್ಯಗಳನ್ನು ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಇದೀಗ ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ತೆರಳಿರುವುದು ಭಕ್ತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಠದ ಮೂರ್ತಿಗಳ ಮಾರಾಟದ ಆರೋಪವೂ ಗಂಭೀರ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.