ಕೇರಳ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ಕೇಳಿಬಂದಿರುವ ಲಂಚದ ಆರೋಪಗಳ ಕುರಿತು ತನಿಖೆ ನಡೆಸಲು ಕೇರಳ ಸರ್ಕಾರ ಆದೇಶಿಸಿದೆ.
ಸುಮಾರು 20 ವರ್ಷಗಳ ಹಿಂದೆ ಕೇರಳದ ಸಾರ್ವಜನಿಕ ನಿರ್ಮಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ರಸ್ತೆ ಕಾಮಗಾರಿಯ ಬಿಲ್ಗಳನ್ನು ಮಂಜೂರು ಮಾಡಲು ₹2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.
ಕೊಲ್ಲಂ ಜಿಲ್ಲೆಯ ಗುತ್ತಿಗೆದಾರ ಸಾಜನ್ ಎಂಬುವವರು ಈ ಕುರಿತು ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರು. ಸುಮಾರು ₹17 ಕೋಟಿ ಮೌಲ್ಯದ ಅನುಮೋದಿತ ಕಾಮಗಾರಿಯ ಬಿಲ್ಗಳನ್ನು ಬಿಡುಗಡೆ ಮಾಡದೆ ತಡೆಹಿಡಿಯಲಾಗಿತ್ತು. ಎಂಜಿನಿಯರ್ಗಳು ಬಿಲ್ಗಳಿಗೆ ಅನುಮೋದನೆ ನೀಡಿದ್ದರೂ ಜ್ಞಾನೇಶ್ ಕುಮಾರ್ ಚೆಕ್ಗಳನ್ನು ತಡೆಹಿಡಿದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಲಂಚದ ಹಣ ನೀಡದ ಹೊರತು ಚೆಕ್ಗಳನ್ನು ಬಿಡುಗಡೆ ಮಾಡಲು ಜ್ಞಾನೇಶ್ ಕುಮಾರ್ ನಿರಾಕರಿಸುತ್ತಿದ್ದಾರೆ ಎಂದು ಮಲೇಷ್ಯಾ ಮೂಲದ ಕಂಪನಿಯ ಯೋಜನಾ ಎಂಜಿನಿಯರ್ ಲೀ ಸೀ ಬೀನ್ ತಮ್ಮ ಗಮನಕ್ಕೆ ತಂದಿದ್ದರು ಎಂದು ಸಾಜನ್ ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸಲು ತಾನು ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಸಾಜನ್ ಪ್ರಸ್ತಾಪಿಸಿದ್ದರೂ, ಕಂಪನಿಯ ಅಧಿಕಾರಿಗಳು ಲಂಚ ನೀಡಲು ನಿರಾಕರಿಸಿದ್ದರು. ಕೊನೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಮತ್ತೊಂದು ಯೋಜನೆಯ ಮೂಲಕ ಲೀ ಸೀ ಬೀನ್ ಹಣದ ವ್ಯವಸ್ಥೆ ಮಾಡಿದ್ದರು ಎಂದು ಸಾಜನ್ ವಿವರಿಸಿದ್ದಾರೆ.
ಈ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇರಳ ಸರ್ಕಾರ ತನಿಖೆಗೆ ಆದೇಶಿಸಿರುವುದು ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಗಮನ ಸೆಳೆದಿದೆ.















