ನಿಟ್ಟೆ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ನ. 6ರಿಂದ; 3,325 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಉಡುಪಿ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ದ 16ನೇ ವಾರ್ಷಿಕ ಘಟಿಕೋತ್ಸವವು ನವೆಂಬರ್ 6 ಮತ್ತು 7ರಂದು ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್‌ಗಳಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ.

ವಿವಿಧ ವಿಭಾಗಗಳ ಒಟ್ಟು 3,325 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದು, ಶೈಕ್ಷಣಿಕ ಸಾಧನೆಗಾಗಿ 57 ಚಿನ್ನದ ಪದಕ ಹಾಗೂ 159 ಪ್ರಶಂಸನಾ ಪತ್ರಗಳನ್ನು ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ವಿಶ್ವವಿದ್ಯಾಲಯದ ಮೈದಾನದಲ್ಲಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್)ಯ ನಿರ್ದೇಶಕ ಪ್ರೊ. ಡಾ. ವಿವೇಕ್ ಲಾಲ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ನವೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಸಂಸ್ಥೆಯ ಆಫ್‌ ಕ್ಯಾಂಪಸ್ ಕೇಂದ್ರದಲ್ಲಿ ಎರಡನೇ ಘಟಿಕೋತ್ಸವ ನಡೆಯಲಿದೆ. ಬೆಂಗಳೂರಿನ ಎಸ್‌-ವ್ಯಾಸ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಹಾಗೂ ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಟೆಕ್ನಾಲಜಿಯ ಮಾಜಿ ಕುಲಪತಿ ಡಾ. ಪ್ರಹ್ಲಾದ ರಾಮರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಂದು ಸಂಜೆ 4 ಗಂಟೆಗೆ ಇದೇ ಕೇಂದ್ರದಲ್ಲಿ ಮೂರನೇ ಘಟಿಕೋತ್ಸವ ನಡೆಯಲಿದ್ದು, ಪಿಎಚ್‌ಡಿ ಸಂಶೋಧಕರು, ಎನ್‌ಎಂಎಎಂಐಟಿ ಮತ್ತು ಜೆಕೆಎಸ್‌ಎಚ್‌ಐಎಂನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಡಾ. ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜು ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್‌ನ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷ ಹಾಗೂ ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್ ವೆಂಪತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಮೂರು ಸಮಾರಂಭಗಳ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ. ಸಹ-ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಉಪಸ್ಥಿತರಿರುವರು. ಕುಲಪತಿಗಳು ಸ್ವಾಗತ ಭಾಷಣ ಮಾಡಲಿದ್ದಾರೆ.

1,148 ಬಿ.ಟೆಕ್ ವಿದ್ಯಾರ್ಥಿಗಳುಪದವಿ ಪಡೆಯಲಿರುವ 3,325 ವಿದ್ಯಾರ್ಥಿಗಳಲ್ಲಿ 1,455 ಮಂದಿ ಮಂಗಳೂರು ಕ್ಯಾಂಪಸ್‌ನವರಾಗಿದ್ದು, 1,870 ಮಂದಿ ನಿಟ್ಟೆ ಕ್ಯಾಂಪಸ್‌ಗೆ ಸೇರಿದವರಾಗಿದ್ದಾರೆ. ಇವರಲ್ಲಿ 1,148 ಬಿ.ಟೆಕ್, 347 ವೈದ್ಯಕೀಯ, 220 ಫಾರ್ಮಸಿ, 181 ಎಂಸಿಎ, 180 ಎಂಬಿಎ ಹಾಗೂ 140 ಬಯೋಲಾಜಿಕಲ್ ಸೈನ್ಸಸ್ ವಿದ್ಯಾರ್ಥಿಗಳು ಸೇರಿದ್ದಾರೆ.

ಉಳಿದಂತೆ ವೈದ್ಯಕೀಯ, ದಂತವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸಸ್, ಪತ್ರಿಕೋದ್ಯಮ, ವಾಸ್ತುಶಿಲ್ಪ, ವಾಕ್ ಮತ್ತು ಶ್ರವಣ, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ವಾಣಿಜ್ಯ ಮತ್ತು ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಒಟ್ಟು 57 ಚಿನ್ನದ ಪದಕಗಳಲ್ಲಿ 39 ನಿಟ್ಟೆ ವಿಶ್ವವಿದ್ಯಾಲಯದ ಚಿನ್ನದ ಪದಕಗಳಾಗಿದ್ದು, 18 ದತ್ತಿ ಚಿನ್ನದ ಪದಕಗಳಾಗಿವೆ. ಶೈಕ್ಷಣಿಕ ಸಾಧನೆ ಗುರುತಿಸಿ 159 ಪ್ರಶಂಸನಾ ಪತ್ರಗಳನ್ನೂ ವಿತರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಹರ್ಷ ಹಲಹಳ್ಳಿ, ಪರೀಕ್ಷಾಂಗ ನಿಯಂತ್ರಕ ಡಾ. ಪ್ರಸಾದ್ ಶೆಟ್ಟಿ, ನಿಟ್ಟೆ ಆಫ್‌ ಕ್ಯಾಂಪಸ್ ಕೇಂದ್ರದ ಪರೀಕ್ಷಾಂಗ ನಿಯಂತ್ರಕ ಡಾ. ಕೆ. ಸುಬ್ರಹ್ಮಣ್ಯ ಭಟ್, ಎಂಜಿನಿಯರಿಂಗ್ ವಿಭಾಗದ ಡೀನ್ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ವ್ಯವಹಾರ ಆಡಳಿತ ವಿಭಾಗದ ಡೀನ್ ಡಾ. ಸುಧೀರ್ ಎಂ., ವಾಣಿಜ್ಯ ಮತ್ತು ನಿರ್ವಹಣೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಡೀನ್ ಡಾ. ವೀಣಾ ಕುಮಾರಿ ಬಿ.ಕೆ. ಮತ್ತು ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣರಾಜ ಜೋಯಿಸ ಎ. ಉಪಸ್ಥಿತರಿದ್ದರು.