ಗೂಗಲ್ ಪೇನಲ್ಲೇ ಇನ್ನು ಶಾಪಿಂಗ್ ಭಾಗ್ಯ: ವರ್ಚುವಲ್ ಟ್ರಯಲ್ ನೋಡಿ ಬಟ್ಟೆ ಖರೀದಿಸುವ ವಿನೂತನ ಫೀಚರ್: ಗೂಗಲ್ ನಿಂದ ಶುರುವಾಯ್ತು ‘ಡಿಸ್ಕವರ್ ಶಾಪ್’

ಭಾರತೀಯರ ದೈನಂದಿನ ಹಣಕಾಸು ವಹಿವಾಟಿನ ಪ್ರಮುಖ ಆಪ್ ಆಗಿರುವ ಗೂಗಲ್ ಪೇ (Google Pay) ಇದೀಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ. ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಆಪ್‌ನಲ್ಲಿ ಇನ್ಮುಂದೆ ಫ್ಯಾಷನ್ ಉತ್ಪನ್ನಗಳ ಶಾಪಿಂಗ್‌ಗೂ ಅವಕಾಶ ಕಲ್ಪಿಸಲು ಗೂಗಲ್ ಮುಂದಾಗಿದೆ. ಇದಕ್ಕಾಗಿ ‘ಡಿಸ್ಕವರ್ ಶಾಪ್’ (Discover Shop) ಎಂಬ ಹೊಸ ವೈಶಿಷ್ಟ್ಯವನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ.

ಗೂಗಲ್ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸದ್ಯ ಆಯ್ದ ಕೆಲವು ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗುತ್ತಿದೆ. ಇದರ ಮೂಲಕ ಬಳಕೆದಾರರು ವಿವಿಧ ಬಗೆಯ ಬಟ್ಟೆಗಳನ್ನು ವೀಕ್ಷಿಸಬಹುದು, ಹೊಸ ಫ್ಯಾಷನ್ ಟ್ರೆಂಡ್‌ಗಳನ್ನು ತಿಳಿದುಕೊಳ್ಳಬಹುದು ಹಾಗೂ ತಮಗಿಷ್ಟವಾದ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಪಡೆಯಬಹುದು.

ಹೇಗೆ ಕಾರ್ಯನಿರ್ವಹಿಸಲಿದೆ ಡಿಸ್ಕವರ್ ಶಾಪ್?

ಗೂಗಲ್ ಪೇ ಆಪ್‌ನ ಕೆಳಭಾಗದಲ್ಲಿ ಹೊಸದಾಗಿ ‘ಡಿಸ್ಕವರ್’ (Discover) ವಿಭಾಗ ಕಾಣಿಸಿಕೊಳ್ಳಲಿದೆ. ಗೂಗಲ್‌ನ 60 ಶತಕೋಟಿಗೂ ಅಧಿಕ ಉತ್ಪನ್ನಗಳ ಮಾಹಿತಿಯನ್ನು ಒಳಗೊಂಡಿರುವ ‘ಶಾಪಿಂಗ್ ಗ್ರಾಫ್’ (Shopping Graph) ಆಧರಿಸಿ ಈ ವೈಶಿಷ್ಟ್ಯ ಕಾರ್ಯನಿರ್ವಹಿಸಲಿದೆ.

ಬಳಕೆದಾರರ ಅಭಿರುಚಿ, ಆಸಕ್ತಿ ಹಾಗೂ ಗೂಗಲ್ ಸೇವೆಗಳಲ್ಲಿ ಅವರು ನಡೆಸಿರುವ ಹುಡುಕಾಟದ ಇತಿಹಾಸವನ್ನು ಆಧರಿಸಿ ವಿವಿಧ ಫ್ಯಾಷನ್ ಉತ್ಪನ್ನಗಳನ್ನು ಶಿಫಾರಸು ಮಾಡಲಾಗುತ್ತದೆ. ಇದರೊಂದಿಗೆ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿ ನೀಡಲು ಯೂಟ್ಯೂಬ್ ವಿಡಿಯೋಗಳನ್ನೂ ತೋರಿಸಲಾಗುತ್ತದೆ.

ವರ್ಚುವಲ್ ಟ್ರೈ-ಆನ್ ವಿಶೇಷ ಆಕರ್ಷಣೆ

ಈ ಹೊಸ ವೈಶಿಷ್ಟ್ಯದ ಪ್ರಮುಖ ಆಕರ್ಷಣೆ ‘ವರ್ಚುವಲ್ ಟ್ರೈ-ಆನ್’ (Virtual Try-On). ಈ ತಂತ್ರಜ್ಞಾನದ ಮೂಲಕ ಖರೀದಿಸುವ ಬಟ್ಟೆಗಳು ತಮ್ಮ ದೇಹಕ್ಕೆ ಹೇಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಮೊಬೈಲ್ ಪರದೆಯಲ್ಲೇ ವರ್ಚುವಲ್ ರೂಪದಲ್ಲಿ ವೀಕ್ಷಿಸಬಹುದು. ಇದರಿಂದ ಬಟ್ಟೆ ಖರೀದಿಸುವ ಮುನ್ನ ಅದರ ನೋಟವನ್ನು ಅಂದಾಜಿಸಲು ಸಾಧ್ಯವಾಗಲಿದೆ.

ಇದರ ಜೊತೆಗೆ ‘ವಿಷುವಲ್ ಸರ್ಚ್’ (Visual Search) ಸೌಲಭ್ಯವೂ ಇರಲಿದೆ. ಬಳಕೆದಾರರು ತಮಗೆ ಇಷ್ಟವಾದ ಬಟ್ಟೆಯ ಫೋಟೋ ತೆಗೆದು ಅಥವಾ ಮೊಬೈಲ್ ಗ್ಯಾಲರಿಯಲ್ಲಿರುವ ಚಿತ್ರವನ್ನು ಅಪ್‌ಲೋಡ್ ಮಾಡಿದರೆ, ಅದೇ ಮಾದರಿಯ ಉತ್ಪನ್ನಗಳನ್ನು ಇಂಟರ್ನೆಟ್‌ನಲ್ಲಿ ಹುಡುಕಿ ತೋರಿಸುತ್ತದೆ. ಉತ್ಪನ್ನದ ಮೇಲೆ ಕ್ಲಿಕ್ ಮಾಡಿದಾಗ ಅದರ ಬಣ್ಣ, ಗಾತ್ರ ಹಾಗೂ ಲಭ್ಯತೆಯ ವಿವರಗಳು ಲಭ್ಯವಾಗುತ್ತವೆ.

ಆದರೆ, ಉತ್ಪನ್ನವನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಮಾರಾಟಗಾರರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಹೊಸ ಫೀಚರ್ ಪಡೆಯುವುದು ಹೇಗೆ?

ಗೂಗಲ್ ಪೇ ಬಳಕೆದಾರರು ಮೊದಲು ಪ್ಲೇ ಸ್ಟೋರ್‌ನಲ್ಲಿ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಬಳಿಕ ಆಪ್ ತೆರೆದಾಗ ಕೆಳಭಾಗದಲ್ಲಿ ಹೊಸ ‘Discover’ ಐಕಾನ್ ಕಾಣಿಸಿಕೊಂಡರೆ ಈ ಸೌಲಭ್ಯವನ್ನು ಬಳಸಬಹುದು. ಐಕಾನ್ ಕಾಣಿಸದಿದ್ದರೆ ನಿಮ್ಮ ಖಾತೆಗೆ ಇನ್ನೂ ಈ ವೈಶಿಷ್ಟ್ಯ ಲಭ್ಯವಾಗಿಲ್ಲ ಎಂದರ್ಥ.

ಈ ಸೇವೆ ಬಳಸಲು ವೈಯಕ್ತಿಕ ಗೂಗಲ್ ಖಾತೆ ಹೊಂದಿರಬೇಕು. ಅಲ್ಲದೆ, ಗೂಗಲ್ ಸೆಟ್ಟಿಂಗ್ಸ್‌ನಲ್ಲಿ ‘Web and App Activity’ ಹಾಗೂ ‘Search Personalisation’ ಆಯ್ಕೆಗಳು ಸಕ್ರಿಯವಾಗಿರಬೇಕು. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ವೈಶಿಷ್ಟ್ಯವನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ವಿಸ್ತರಿಸುವ ನಿರೀಕ್ಷೆಯಿದೆ.