ಮಂಡ್ಯಕ್ಕೆ ಇಂದು ಸಿಎಂ ಡಿ.ಕೆ. ಶಿವಕುಮಾರ್ ಭೇಟಿ – 1,793 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ

ಮಂಡ್ಯ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್‌ (D.K Shivakumar) ಅವರು ಇಂದು (ಅ.31) ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಮಂಡ್ಯ (Mandya) ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗಲಿರುವ ಸಮಾರಂಭದಲ್ಲಿ ಒಟ್ಟು 1,793 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ಪ್ರವಾಸದ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮತ್ತು ಗಣ್ಯರ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಗೂ ಆಕರ್ಷಕ ವೇದಿಕೆಯನ್ನು ನಿರ್ಮಿಸಲಾಗಿದೆ.

ಒಟ್ಟು 1,643 ಕೋಟಿ ರೂ. ಅಂದಾಜು ವೆಚ್ಚದ 40 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ಪೂರ್ಣಗೊಂಡಿರುವ ಸುಮಾರು 149 ಕೋಟಿ ರೂ. ವೆಚ್ಚದ 17 ನೂತನ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸರ್ಕಾರದ ವಿವಿಧ ಜನಪರ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುವುದು.

ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಜಿಲ್ಲಾ ಆಡಳಿತ ಮತ್ತು ಪಕ್ಷದ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾರ್ಯಕ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗುತ್ತಿದೆ.