ಚೆನ್ನೈ: ತಮಿಳುನಾಡಿನ ಥೇಣಿ (Theni) ಜಿಲ್ಲೆಯ ಉಪಜೈಲಿನಿಂದ 17 ಖೈದಿಗಳು ಪರಾರಿಯಾದ ಪ್ರಕರಣಕ್ಕೆ (Tamil Nadu Jail Break) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ (CM Vijay) ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮತ್ತು ಭದ್ರತಾ ಲೋಪದ ಆರೋಪದ ಹಿನ್ನೆಲೆಯಲ್ಲಿ ಉಪಜೈಲಿನ ಪ್ರಭಾರ ಉಪ ಅಧೀಕ್ಷಕರನ್ನು ಅಮಾನತುಗೊಳಿಸುವಂತೆ ವಿಜಯ್ ಆದೇಶಿಸಿದ್ದಾರೆ. ಇದರ ಜೊತೆಗೆ ಜೈಲು ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಆದೇಶಿಸಿದೆ.
ಅಕ್ಟೋಬರ್ 26ರಂದು ಥೇಣಿ ಜಿಲ್ಲೆಯ ಉಪಜೈಲಿನಲ್ಲಿ ಈ ಘಟನೆ ನಡೆದಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿಯ ನಾಟಕವಾಡಿದ 17 ವಿಚಾರಣಾಧೀನ ಖೈದಿಗಳು, ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದರು. ಈ ಘಟನೆಯಿಂದ ರಾಜ್ಯದ ಜೈಲು ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು.
ಖೈದಿಗಳು ಪರಾರಿಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ತಮಿಳುನಾಡು ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಪೊಲೀಸ್ ತಂಡಗಳನ್ನು ರಚಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಡ್ರೋನ್ಗಳ ನೆರವಿನಿಂದ ಜೈಲಿನಿಂದ ದೂರದ ಪೊದೆಗಳಲ್ಲಿ ಅಡಗಿದ್ದ ಎಂಟು ಖೈದಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಬಳಿಕ ಪರಾರಿಯಾಗಿದ್ದ ಎಲ್ಲಾ 17 ಕೈದಿಗಳನ್ನು ಮತ್ತೆ ಸೆರೆಹಿಡಿದು ಬಂಧಿಸಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ವಿಜಯ್, ಜೈಲು ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. ಜೈಲಿನಲ್ಲಿರುವ ಖೈದಿಗಳ ಮೇಲೆ ಸರಿಯಾದ ನಿಗಾ ವಹಿಸದಿರುವುದು, ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳೇ ಈ ಘಟನೆಗೆ ಕಾರಣವಾಗಿವೆ ಎಂದು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಇದರ ಬೆನ್ನಲ್ಲೇ ಥೇಣಿ ಜಿಲ್ಲಾ ಉಪಜೈಲಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಉಪ ಜೈಲರ್ ಎನ್.ನಾಗೇಶ್ವರನ್ ಅವರನ್ನು ಅಕ್ಟೋಬರ್ 30ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 2024ರ ಆಗಸ್ಟ್ 6ರಿಂದ ಅವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಖೈದಿಗಳು ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಸರಿಯಾದ ನಿಯಂತ್ರಣ, ಮೇಲ್ವಿಚಾರಣೆ ಮತ್ತು ನಿಗಾ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ತಮಿಳುನಾಡು ನಾಗರಿಕ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೂ ಅಮಾನತು ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
ಇನ್ನು ಜೈಲು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಮುಂದಾಗಿದೆ. ಮಧುರೈ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಕೃಷ್ಣರಾಜ್ ಅವರನ್ನು ಸೇಲಂ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.
ಜೈಲು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ವಿಜಯ್, ಪ್ರತಿಯೊಬ್ಬ ಅಧಿಕಾರಿಯೂ ಸಂಪೂರ್ಣ ಬದ್ಧತೆ, ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಜೈಲು ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಆಲಸ್ಯ ಅಥವಾ ಬೇಜವಾಬ್ದಾರಿತನ ತೋರಿದ ಯಾವುದೇ ಅಧಿಕಾರಿಯನ್ನು ಸರ್ಕಾರ ಸಹಿಸುವುದಿಲ್ಲ. ಅಂತಹವರ ವಿರುದ್ಧ ಅತ್ಯಂತ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಜೈಲು ಎಸ್ಕೇಪ್ ಪ್ರಕರಣದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಜೈಲು ಇಲಾಖೆಯ ಉನ್ನತ ಮಟ್ಟದಲ್ಲೂ ಬದಲಾವಣೆ ಮಾಡಿದೆ. ಜೈಲುಗಳ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಅವರನ್ನು ಟ್ಯಾಂಜೆಡ್ಕೊ ಸಂಸ್ಥೆಯ ಮುಖ್ಯ ಜಾಗೃತ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೆ.ಶಂಕರ್ ಅವರನ್ನು ಜೈಲು ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.















