ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಮೊದಲ ಪಟ್ಟಿಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಘೋಷಿಸಿ, ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಕಾರಣ ನೀಡಿ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಸಮಾಜ ಸೇವಾ ಕ್ಷೇತ್ರದಲ್ಲಿ ಆದರ್ಶ ಚಾರಿಟೇಬಲ್ ಟ್ರಸ್ಟ್ನ ಡಾ.ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಪಟ್ಟಿಯಲ್ಲಿ ಅವರ ಹೆಸರಿನ ಎದುರು ಉಡುಪಿ ಜಿಲ್ಲೆಯ ಬದಲು ಉತ್ತರ ಕನ್ನಡ ಎಂದು ನಮೂದಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ, ತಾಂತ್ರಿಕ ದೋಷದಿಂದಾಗಿ ತಪ್ಪಾಗಿ ಹೆಸರು ಪ್ರಕಟವಾಗಿದೆ ಎಂದು ತಿಳಿಸಿ, ಅವರ ಹೆಸರನ್ನು ಕೈಬಿಟ್ಟು ಉತ್ತರ ಕನ್ನಡ ಜಿಲ್ಲೆಯ ಗಜಾನನ ಉಮಾಮಹೇಶ್ವರ ಭಟ್ (ಜಿ.ಯು. ಭಟ್) ಅವರನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಿಸಿತು.
ಜಿ.ಯು. ಭಟ್ ಅವರು ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಡಾ. ಚಂದ್ರಶೇಖರ್ ಅವರಿಗೆ ಘೋಷಿಸಿದ್ದ ಪ್ರಶಸ್ತಿಯನ್ನು ಹಿಂಪಡೆದ ಕ್ರಮದ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿವೆ.
ಸಾರ್ವಜನಿಕ ಅವಮಾನ: ಡಾ. ಭಂಡಾರಿ
ಈ ಕುರಿತು ಪ್ರತಿಕ್ರಿಯಿಸಿರುವ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಕಳೆದ 30 ವರ್ಷಗಳಿಂದ ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ಜಿ.ಎಸ್. ಚಂದ್ರಶೇಖರ್ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ, ಬಳಿಕ ತಾಂತ್ರಿಕ ಕಾರಣ ನೀಡಿ ಕೈಬಿಟ್ಟಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಪಟ್ಟಿಯಲ್ಲಿ ಜಿಲ್ಲೆಯ ಹೆಸರು ತಪ್ಪಾಗಿದ್ದರೆ ಉತ್ತರ ಕನ್ನಡದ ಬದಲು ಉಡುಪಿ ಎಂದು ಒಂದು ಸಾಲಿನ ತಿದ್ದುಪಡಿ ಆದೇಶ ಹೊರಡಿಸಬಹುದಿತ್ತು. ಆದರೆ, ಪ್ರಶಸ್ತಿಗೆ ಘೋಷಿಸಿದ ಗೌರವವನ್ನೇ ಹಿಂಪಡೆಯುವುದು ತಿದ್ದುಪಡಿಯಲ್ಲ. ಯಾವುದೇ ತಪ್ಪು ಮಾಡದ ವ್ಯಕ್ತಿಗೆ ಇದರಿಂದ ಸಾರ್ವಜನಿಕ ಅವಮಾನ ಮಾಡಿದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾ. ಚಂದ್ರಶೇಖರ್ ಅವರಿಗೆ ಘೋಷಿಸಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಹೆಸರಿನೊಂದಿಗೆ ಮರುಘೋಷಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಸಮಾಜಕ್ಕೂ ಮಾಡಿದ ಅವಮಾನ: ರವಿರಾಜ್ ಎಚ್.ಪಿ.
ಡಾ. ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿದ್ದು, ಸರ್ಕಾರದ ಕ್ರಮ ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಹೇಳಿದ್ದಾರೆ.
30 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆಯ ಜತೆಗೆ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಚಂದ್ರಶೇಖರ್ ಅವರ ಕೊಡುಗೆ ಅನನ್ಯವಾದುದು. ತಾಂತ್ರಿಕ ದೋಷದ ನೆಪದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರ. ಇದು ಅವರನ್ನು ನಂಬಿ ಗೌರವಿಸುವ ಸಮಸ್ತ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಡಾ. ಚಂದ್ರಶೇಖರ್ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಅವರ ಸೇವೆಗೆ ತಕ್ಕ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.















