ಉಡುಪಿ: ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದು

ಉಡುಪಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಬಾರಿ ನಿರಾಸೆ ಎದುರಾಗಿದೆ. ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ನೀಡಲಾಗುತ್ತಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಯಕ್ಷಗಾನ, ಕಲೆ, ಸಾಹಿತ್ಯ, ಕ್ರೀಡೆ, ಕಂಬಳ, ಕೃಷಿ, ಸಮಾಜಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿತ್ತು.

ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿತ್ತು.

ರಾಜ್ಯ ಮಟ್ಟದ ಪ್ರಶಸ್ತಿಯಿಂದ ವಂಚಿತರಾಗುವ ಸ್ಥಳೀಯ ಪ್ರತಿಭೆಗಳು ಮತ್ತು ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಹತ್ವದ ಗೌರವದ ವೇದಿಕೆಯಾಗಿತ್ತು. ಫಲಕ, ಶಾಲು ಹಾಗೂ ಅಭಿನಂದನಾ ಪತ್ರದೊಂದಿಗೆ ಸಾಧಕರನ್ನು ಗೌರವಿಸಲಾಗುತ್ತಿತ್ತು.

ಆದರೆ, ಈ ಬಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರು ಈ ಗೌರವದ ನಿರೀಕ್ಷೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಪರಂಪರೆ ಮುಂದುವರಿಸುವಂತೆ ಒತ್ತಾಯಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನಕ್ಕೆ ಆಡಳಿತಾತ್ಮಕ ಅಥವಾ ಇತರ ಯಾವುದೇ ಕಾರಣಗಳಿಂದ ಸಮಸ್ಯೆ ಎದುರಾಗಿದ್ದರೆ, ದಾನಿಗಳು ಮತ್ತು ಸಂಘ–ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಬಹುದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರ್ಕಾರ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ದಶಕಗಳಿಂದ ನಡೆದುಕೊಂಡು ಬಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ ಪರಂಪರೆಗೆ ಈ ರೀತಿ ಬ್ರೇಕ್ ಬೀಳಬಾರದು ಎಂಬ ಒತ್ತಾಯ ಕೇಳಿಬಂದಿದೆ.

ಪ್ರಶಸ್ತಿ ಎನ್ನುವುದು ಕೇವಲ ಫಲಕ, ಶಾಲು ಅಥವಾ ಅಭಿನಂದನಾ ಪತ್ರಕ್ಕೆ ಸೀಮಿತವಲ್ಲ. ವರ್ಷಗಳ ಪರಿಶ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ದೊರೆಯುವ ಗೌರವ ಹಾಗೂ ಮುಂದಿನ ಸಾಧನೆಗೆ ಪ್ರೇರಣೆಯಾಗಿದೆ. ಹೀಗಾಗಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಈ ಪರಂಪರೆಯನ್ನು ಮುಂದಿನ ದಿನಗಳಲ್ಲಾದರೂ ಮುಂದುವರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯದಿರಲು ಕಾರಣವೇನು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.