ಹಾಲು ಮತ್ತು ಮೊಸರಿನ ದರದಲ್ಲಿ ಭಾರೀ ಹೆಚ್ಚಳ: ಜನಸಾಮಾನ್ಯರಿಂದ ಆಕ್ರೋಶ

ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತೊಂದು ಶಾಕ್ ನೀಡಿದೆ. ನವೆಂಬರ್ 1ರಿಂದ ಹಾಲು ಮತ್ತು ಮೊಸರಿನ ದರದಲ್ಲಿ ಹೆಚ್ಚಳವಾಗಲಿದ್ದು, ಇದು ಮಧ್ಯಮ ವರ್ಗದ ಕುಟುಂಬಗಳ ತಿಂಗಳ ಬಜೆಟ್ ಮೇಲೆ ಮತ್ತಷ್ಟು ಹೊರೆ ಉಂಟುಮಾಡಲಿದೆ.

ಹೊಸ ದರದ ಪ್ರಕಾರ ಲೀಟರ್ ಹಾಲಿನ ಬೆಲೆಯಲ್ಲಿ 8 ರೂ. ಹಾಗೂ ಅರ್ಧ ಕೆ.ಜಿ. ಮೊಸರಿನ ಬೆಲೆಯಲ್ಲಿ 14 ರೂ. ಹೆಚ್ಚಳವಾಗಲಿದೆ

ಹಾಲಿನ ದರ ಏರಿಕೆಯನ್ನು ಹೇಗೋ ಒಪ್ಪಿಕೊಳ್ಳಬಹುದು. ಆದರೆ ಮೊಸರಿನ ಬೆಲೆಯನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸಿರುವುದೇಕೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ. ಅದರಲ್ಲೂ ಅರ್ಧ ಕೆ.ಜಿ. ಮೊಸರಿಗೆ ಏಕಾಏಕಿ 14 ರೂ. ಹೆಚ್ಚಳ ಮಾಡಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಮೊಸರಿನ ದರ ಪರಿಷ್ಕರಣೆ ಕುರಿತು ಚಿಲ್ಲರೆ ಮಾರಾಟಗಾರರಿಗೂ ಇನ್ನೂ ಸ್ಪಷ್ಟ ಮಾಹಿತಿ ತಲುಪಿಲ್ಲ ಎನ್ನಲಾಗಿದೆ. ಸದ್ಯ ಹಾಲಿನ ಹೊಸ ದರದ ಪಟ್ಟಿಯನ್ನು ಮಾತ್ರ ಕೆಎಂಎಫ್ ಮಾರಾಟಗಾರರಿಗೆ ಕಳುಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಗೃಹಿಣಿಯೊಬ್ಬರು, “ಹಾಲಿಗೆ 8 ರೂ. ಹೆಚ್ಚಳ ಮಾಡಿದರೆ, ಮೊಸರಿಗೆ 14 ರೂ. ಏರಿಕೆ ಮಾಡಿರುವುದರ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ. ಈ ಸುದ್ದಿ ನೋಡಿ ನನಗೆ ಆಘಾತವಾಯಿತು. ಸುಮಾರು 10 ನಿಮಿಷ ಸುಮ್ಮನೆ ಕುಳಿತುಬಿಟ್ಟೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆಯಲ್ಲಿರುವ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಸರಕಾರ ಮತ್ತು ಕೆಎಂಎಫ್ ಗ್ರಾಹಕರ ಆರ್ಥಿಕ ಪರಿಸ್ಥಿತಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ಸಾಮಾನ್ಯ ಕುಟುಂಬಗಳ ದೈನಂದಿನ ಖರ್ಚಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಗ್ರಾಹಕರಲ್ಲಿ ಹೊಸ ದರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.