ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್ ಘಟಿಕೋತ್ಸವದ ಸಂಭ್ರಮ: ಆಯುರ್ವೇದದ ಮೂಲಕ ಜೀವನಶೈಲಿ ಸುಧಾರಣೆಗೆ ವಿಫುಲ ಅವಕಾಶ: ಡಾ. ಮೋಹನ ಆಳ್ವ

ಉಡುಪಿ: ಆಧುನಿಕ ಜೀವನಶೈಲಿಯಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸಬಲ್ಲದು. ಹೀಗಾಗಿ ಹರ್ಬಲ್ ಹಾಗೂ ರಾಸಾಯನಿಕ ಮುಕ್ತ ಸೌಂದರ್ಯವರ್ಧಕ ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಯುರ್ವೇದದ ಸಾಮರ್ಥ್ಯ ಮತ್ತು ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಇದು ಸೂಕ್ತ ಸಮಯ. ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಮಾನವೀಯತೆ, ಕರುಣೆ ಹಾಗೂ ಸೇವಾ ಮನೋಭಾವದೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯನ್ನು ವೈದ್ಯರು ಅರಿತುಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್ ಹಾಗೂ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಆ್ಯಂಡ್ ನ್ಯಾಚುರೋಪತಿ ವತಿಯಿಂದ ನಗರದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಕೇಂದ್ರ ಸರಕಾರದ  ಪ್ರೋತ್ಸಾಹ

ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆಯುರ್ವೇದ ಕ್ಷೇತ್ರದ ಅಭಿವೃದ್ಧಿ ಹಾಗೂ ಸಂಶೋಧನೆಗಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆಯುರ್ವೇದ ಚಿಕಿತ್ಸಾ ಸೇವೆಗಳನ್ನು ಟೆಲಿಮೆಡಿಸಿನ್ ಮೂಲಕ ದೇಶ-ವಿದೇಶಗಳ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಆಯುರ್ವೇದ ಶಿಕ್ಷಣ ವ್ಯವಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ಗುಣಮಟ್ಟ ಹಾಗೂ ಸಂಶೋಧನಾ ಚಟುವಟಿಕೆಗಳು ವಿಸ್ತಾರಗೊಂಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ದೊರೆಯುತ್ತಿದೆ. ಮುನಿಯಾಲ್ ಆಯುರ್ವೇದ ಕಾಲೇಜು 17 ವಿದೇಶಿ ಪೇಟೆಂಟ್ ಹಾಗೂ 8 ದೇಶೀಯ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದು, ಇನ್ನೂ ಹಲವು ಪೇಟೆಂಟ್‌ಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ. ಇದು ಸಂಸ್ಥೆಯ ಸಂಶೋಧನಾ ಸಾಧನೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ಡಾ. ವಿಜಯಬಾನು ಶೆಟ್ಟಿ ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಘಟಿಕೋತ್ಸವದ ಪ್ರಕ್ರಿಯೆ ನಡೆಸಿ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಆಡಳಿತ ನಿರ್ದೇಶಕಿ ಶ್ರದ್ಧಾ ಶೆಟ್ಟಿ ಪ್ರಸ್ತಾವನೆಗೈದರು. ವಿ. ಹರಿಪ್ರಸಾದ್ ಭಟ್ ಸ್ವಾಗತಿಸಿದರು. ಡಾ. ಗುರುರಾಜ್ ತಂತ್ರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಅಶ್ವಿತಾ ಹಾಗೂ ಅಶ್ವಿನಿ ನಾಯಕ್ ವಿವಿಧ ಪದವಿ ಪಟ್ಟಿಗಳನ್ನು ವಾಚಿಸಿದರು. ಡಾ. ಮಾನಸಾ ಮತ್ತು ಡಾ. ಧನ್ಯಾ ಕಾರ್ಯಕ್ರಮ ನಿರೂಪಿಸಿದರು. ಡಾ. ಸುರೇಶ್ ಭಟ್ ವಂದಿಸಿದರು.

ಮಧ್ಯಾಹ್ನ ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ ಹಾಗೂ ಸಂಜೆ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.

117 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ 103 ವಿದ್ಯಾರ್ಥಿಗಳಿಗೆ ಆಯುರ್ವೇದ ಪದವಿ ಹಾಗೂ 12 ವಿದ್ಯಾರ್ಥಿಗಳಿಗೆ ಆಯುರ್ವೇದ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ, ಬಿಎನ್‌ಎಸ್ ಮೊದಲ ಬ್ಯಾಚ್‌ನ ಇಬ್ಬರು ವಿದ್ಯಾರ್ಥಿಗಳಿಗೂ ಪದವಿ ನೀಡಿ ಗೌರವಿಸಲಾಯಿತು.