ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆ ಹಾಗೂ ವಿವಿಧ ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ನಿಂದ ಜೋಡುಕಟ್ಟೆಯವರೆಗೆ ‘ಊರೂರು ಜಂತರ್ ಮಂತರ್’ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು.
ಕ್ಲಾಕ್ ಟವರ್ ಬಳಿಯಿಂದ ಕಾಲ್ನಡಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜೋಡುಕಟ್ಟೆಯಲ್ಲಿ ಸಭೆ ನಡೆಸಿ, ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರೆ ಭವ್ಯ ನರಸಿಂಹಮೂರ್ತಿ, 2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಹಾಗೂ ಯುವಜನರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಸೋಲುವ ಭೀತಿ ಎದುರಾದಾಗ ಚುನಾವಣಾ ಆಯೋಗವನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಆಯೋಗದ ಕಾರ್ಯವೈಖರಿಯನ್ನೂ ಪ್ರಶ್ನಿಸಿದರು. ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ಈ ಹಿಂದೆ ನಡೆದ ದಬ್ಬಾಳಿಕೆಗಳಿಗೆ ಈಗಿನ ಯುವಪೀಳಿಗೆ ಪ್ರಜಾಸತ್ತಾತ್ಮಕವಾಗಿ ಪ್ರತಿಕ್ರಿಯಿಸುತ್ತಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ದೇಶದ 13 ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಹಾಜರಾಗದೆ ದೂರ ಉಳಿದಿದ್ದಾರೆ ಎಂದು ಟೀಕಿಸಿದ ಅವರು, ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆಯಾಗುವ ಆತಂಕವಿದೆ ಎಂದರು.
ಕೂಡಲೇ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಹಬಾಳ್ವೆ ಸಂಘಟನೆಯ ಫಣಿರಾಜ್, ಸುಂದರ್ ಮಾಸ್ಟರ್, ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್, ಹರಿಪ್ರಸಾದ್ ರೈ, ಹರೀಶ್ ಕಿಣಿ, ಇಸ್ಮಾಯಿಲ್ ಕೊಡಿಬೆಂಗ್ರೆ, ಪ್ರಶಾಂತ್ ಜತ್ತನ್, ನಾಗೇಶ್ ಕುಮಾರ್ ಉದ್ಯಾವರ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.















