ಉಡುಪಿ: ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘ (ರಿ.), ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸಹಯೋಗದಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ಮತ್ತು ಕಾರ್ಯಾಗಾರ ಅ.25ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಶ್ರೀ ಶಿರೂರು ಮಠ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಎಚ್.ಎನ್. ವೆಂಕಟೇಶ್ ತಿಳಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಹಿಂದಿ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಭಾಷಾ ಬೋಧನೆ, ತೃತೀಯ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಭಾಷೆಗಳ ಪಾತ್ರದ ಕುರಿತು ಚರ್ಚೆ ನಡೆಯಲಿದೆ ಎಂದರು.
ಬೆಳಿಗ್ಗೆ 8.30ರಿಂದ ನೋಂದಣಿ ಮತ್ತು ಉಪಾಹಾರ, 9 ಗಂಟೆಯಿಂದ ವಿದ್ವಾನ್ ನಟರಾಜ್ ಎಚ್.ಎನ್. ಮತ್ತು ಬಳಗದವರಿಂದ ಹಿಂದಿ ಗೀತಾಗಾಯನ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘದ ರಾಜ್ಯಾಧ್ಯಕ್ಷ ಶಶಿಧರ ಸಿ.ಎಂ. ಅಧ್ಯಕ್ಷತೆ ವಹಿಸಲಿದ್ದು, ಪರ್ಯಾಯ ಶ್ರೀ ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಉದ್ಘಾಟಿಸಲಿದ್ದಾರೆ.
ಸಂಘದ ಗೌರವಾಧ್ಯಕ್ಷ ಡಿ.ಎಂ. ರಾಥೋಡ್ ಗೌರವ ಉಪಸ್ಥಿತರಿರಲಿದ್ದಾರೆ.ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸಿ. ಮತ್ತು ಡಾ. ಅಶೋಕ್ ಕಾಮತ್, ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸ್ಥಾಪಕ ಅಧ್ಯಕ್ಷ ದಿನಕರ ಆರ್. ಶೆಟ್ಟಿ, ನಿವೃತ್ತ ಪರಿವೀಕ್ಷಣಾಧಿಕಾರಿ ನಾಗರಾಜ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಭಾಷೆಗಳ ಕೊಡುಗೆ ಕುರಿತು ಗೋಷ್ಠಿಮೊದಲ ಗೋಷ್ಠಿಯಲ್ಲಿ ‘ಭಾವೈಕ್ಯತೆಗಾಗಿ ಭಾಷೆಗಳ ಕೊಡುಗೆ’ ವಿಷಯದ ಕುರಿತು ಚರ್ಚೆ ನಡೆಯಲಿದೆ.
ಉಡುಪಿ ಡಯಟ್ ಪ್ರಾಂಶುಪಾಲ ಹಾಗೂ ಉಪನಿರ್ದೇಶಕ ಡಾ. ಅಶೋಕ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ, ತುಳು, ಕೊಂಕಣಿ, ಉರ್ದು, ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಪ್ರತಿನಿಧಿಗಳು ಆಯಾ ಭಾಷೆಗಳ ಕೊಡುಗೆಯನ್ನು ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಜಿಲ್ಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ. ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ರಘುಪತಿ ಭಟ್ ಹಾಗೂ ಭಾರತೀಯ ಶಿಕ್ಷಾ ಬೋರ್ಡ್ನ ವಿಶಿಷ್ಟ ಸದಸ್ಯ ಮತ್ತು ಕೇಎಎಎಂಎಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಉಪಸ್ಥಿತರಿರಲಿದ್ದಾರೆ.
ಮೂರನೇ ಗೋಷ್ಠಿಯಲ್ಲಿ ‘ತೃತೀಯ ಭಾಷೆಯ ಮಹತ್ವ’ ಕುರಿತು ಚರ್ಚೆ ನಡೆಯಲಿದೆ.
ತೃತೀಯ ಭಾಷಾ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳು, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯಲ್ಲಿ ತೃತೀಯ ಭಾಷೆಯ ಪಾತ್ರ, ಉದ್ಯೋಗ ಸೃಷ್ಟಿಯಲ್ಲಿ ಭಾಷೆಗಳ ಮಹತ್ವ, ರಾಜಭಾಷೆಯಾಗಿ ಹಿಂದಿಯ ಕೊಡುಗೆ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ವಿಷಯ ಮಂಡನೆ ನಡೆಯಲಿದೆ.
ಸಮಾರೋಪದಲ್ಲಿ ಗಣ್ಯರ ಉಪಸ್ಥಿತಿ ಮಧ್ಯಾಹ್ನ 1.30ರಿಂದ 2.30ರವರೆಗೆ ಊಟದ ವಿರಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಹಿರಿಯ ಶಾಸಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ್, ಕೋಶಾಧಿಕಾರಿ ಸತೀಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಗೀತಾ ಕುಮಾರಿ, ಜಿಲ್ಲಾ ಉಪಾಧ್ಯಕ್ಷೆ ರುಮಿಲಾ, ಜೊತೆ ಕಾರ್ಯದರ್ಶಿ ಮಾಲಿನಿ ಡಿ. ರಮೇಶ್ ಸೇರಿದಂತೆ ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.















