ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿರುವುದನ್ನು ಬ್ಯಾಂಕ್ ದೃಢಪಡಿಸಿದೆ. ಸುಮಾರು 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಸೋರಿಕೆಯಾಗಿರುವ ಮಾಹಿತಿಯಲ್ಲಿ ಗ್ರಾಹಕರ ಹೆಸರು, ವಾಸಸ್ಥಳದ ವಿಳಾಸ, ಫೋನ್ ನಂಬರ್, ಜನ್ಮ ದಿನಾಂಕ, ಸಾಲ ಪಡೆಯಲು ಸಲ್ಲಿಸಿರುವ ಅಗತ್ಯ ದಾಖಲೆಗಳು ಹಾಗೂ ಪ್ರಮುಖ ಗುರುತಿನ ಚೀಟಿಗಳ ವಿವರಗಳು ಸೇರಿವೆ. ಡಾರ್ಕ್ ವೆಬ್‌ನಲ್ಲಿ ಪತ್ತೆಯಾದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ಪರಿಶೀಲನೆಯ ಬಳಿಕ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿ ಸೋರಿಕೆಯಾಗಿರುವುದು ಖಚಿತವಾಗಿದೆ ಎಂದು ಬ್ಯಾಂಕ್ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.
ಅಕ್ಟೋಬರ್ 16ರಂದು ಗ್ರಾಹಕರ ಡೇಟಾ ಸೋರಿಕೆಯಾಗುವ ಸಾಧ್ಯತೆಯ ಕುರಿತು ಥ್ರೆಟ್ ಇಂಟೆಲಿಜೆನ್ಸ್ ಸೇವಾ ಪೂರೈಕೆದಾರರು, ಡಿಫೆನ್ಸ್ ಸೈಬರ್ ಏಜೆನ್ಸಿ ಹಾಗೂ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ನಿಂದ ಬ್ಯಾಂಕ್‌ಗೆ ಎಚ್ಚರಿಕೆ ಸಂದೇಶ ಬಂದಿತ್ತು.
ಈ ಎಚ್ಚರಿಕೆಯ ಬೆನ್ನಲ್ಲೇ ಎಸ್‌ಬಿಐ ತನ್ನ ಸೈಬರ್ ಘಟನೆ ನಿರ್ವಹಣಾ ವ್ಯವಸ್ಥೆ ಹಾಗೂ ಭದ್ರತಾ ನಿಯಮಾವಳಿಗಳನ್ನು ತಕ್ಷಣ ಜಾರಿಗೆ ತಂದಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.















