ಉಚ್ಚಿಲ ದಸರಾದಲ್ಲಿ ಪುಟಾಣಿಗಳ ಅಬ್ಬರ: ಶಾರದಾ ವೇಷ, ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ!

ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾದ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ನವದುರ್ಗೆಯರ ದರ್ಶನದ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತಿವೆ. ದಸರಾ ಉತ್ಸವದ ಅಂಗವಾಗಿ ನಡೆದ ಶಾರದಾ ದೇವಿಯ ಛದ್ಮವೇಷ ಹಾಗೂ ಕಿನ್ನ ಪಿಲಿ ನಲಿಕೆ (ಪುಟಾಣಿ ಹುಲಿ ಕುಣಿತ) ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.

ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ನಡೆಯುತ್ತಿರುವ ಉಚ್ಚಿಲ ದಸರಾದಲ್ಲಿ ಪುಟಾಣಿ ಮಕ್ಕಳ ಶಾರದಾ ದೇವಿಯ ವೇಷ ಭಕ್ತಿಭಾವ ಮೂಡಿಸಿದರೆ, ತಾಸೆಯ ಅಬ್ಬರಕ್ಕೆ ಹೆಜ್ಜೆ ಹಾಕಿದ ಮಕ್ಕಳ ಹುಲಿ ಕುಣಿತ ನೋಡುಗರನ್ನು ರಂಜಿಸಿತು. ಹಿರಿಯ ಹುಲಿ ವೇಷಧಾರಿಗಳನ್ನೇ ನೆನಪಿಸುವ ರೀತಿಯಲ್ಲಿ ಮಕ್ಕಳು ವಿವಿಧ ಸಾಹಸ ಪ್ರದರ್ಶನಗಳನ್ನು ನೀಡಿದರು. ಸ್ಟಂಟ್‌ಗಳ ಜತೆಗೆ ಬಾಯಿಯಲ್ಲಿ ಅಕ್ಕಿಮುಡಿ ಕಚ್ಚಿ ಎತ್ತಿ ಎಸೆಯುವ ಕೌಶಲ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮಕ್ಕಳ ವೇಷಭೂಷಣ, ನೃತ್ಯ ಹಾಗೂ ಹುರುಪಿನ ಪ್ರದರ್ಶನ ಪೋಷಕರಲ್ಲಿಯೂ ಸಂಭ್ರಮ ಮೂಡಿಸಿತು. ದಸರಾ ವೀಕ್ಷಣೆಗೆ ಆಗಮಿಸಿದ್ದ ಭಕ್ತರು ಪುಟಾಣಿಗಳ ಪ್ರತಿಭೆಯನ್ನು ಕಣ್ತುಂಬಿಕೊಂಡರು.

ಹುಲಿ ಕುಣಿತದಲ್ಲಿ ಯುವತಿಯರ ಸೈಹುಲಿ ಕುಣಿತದ ಸಂಭ್ರಮ ಮಕ್ಕಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಯುವತಿಯರು ಹಾಗೂ ಪುರುಷರ ತಂಡಗಳೂ ಹುಲಿ ಕುಣಿತದ ಮೂಲಕ ಪ್ರೇಕ್ಷಕರನ್ನು ರಂಜಿಸಿದವು.

ವಿಶೇಷವಾಗಿ ಯುವತಿಯರು ತಾಸೆಯ ಸದ್ದಿಗೆ ಹುರುಪಿನಿಂದ ಹೆಜ್ಜೆ ಹಾಕಿ, ಸಾಹಸಮಯ ಪ್ರದರ್ಶನದ ಮೂಲಕ ಗಮನ ಸೆಳೆದರು. ನವದುರ್ಗೆಯರ ಸನ್ನಿಧಿಯಲ್ಲಿ ಮಹಿಳೆಯರೂ ಹುಲಿ ಕುಣಿತದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಉಚ್ಚಿಲ ದಸರಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಸ್ಪರ್ಧೆಗಳೂ ಉತ್ಸವಕ್ಕೆ ಮೆರುಗು ನೀಡುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ, ದಾಂಡಿಯಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಿ ಮತ್ತು ಮನರಂಜನೆಯ ಸಂಗಮವಾಗಿ ದಸರಾ ಸಂಭ್ರಮ ಮುಂದುವರಿಯಲಿದೆ.