ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ; 2028ರ ಚುನಾವಣೆಗೆ ಸ್ಪರ್ಧೆ ಖಚಿತ: ರಘುಪತಿ ಭಟ್

ಮಂಗಳೂರು: ಕಾಂಗ್ರೆಸ್ ಸೇರ್ಪಡೆ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚಿಸುತ್ತಿದ್ದೇನೆ. ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿಯಿಂದಲೂ ಆಹ್ವಾನ ಬರುವ ನಿರೀಕ್ಷೆಯಲ್ಲಿದ್ದೇನೆ. ಆಹ್ವಾನ ನೀಡಿದರೆ ಅದರ ಬಗ್ಗೆಯೂ ಯೋಚಿಸಬಹುದು ಎಂದರು.

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದಿದ್ದೇನೆ. ಬಿಜೆಪಿಯಲ್ಲಿ ಯುವ ಮೋರ್ಚಾದ ಜಿಲ್ಲಾ ಘಟಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಮೂರು ಬಾರಿ ಶಾಸಕನಾಗಿಯೂ ಆಯ್ಕೆಯಾಗಿದ್ದೇನೆ. ಇಂತಹ ಹಿನ್ನೆಲೆಯಿರುವಾಗ ಪಕ್ಷ ಬದಲಿಸುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮನಸ್ಸಿಗೂ ಅದು ಒಪ್ಪುವುದಿಲ್ಲ. ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ತಪ್ಪಿದ್ದರಿಂದ ತೀವ್ರ ನೋವಾಗಿದೆ. ಬಳಿಕ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡಲಿಲ್ಲ. ಇದರಿಂದ ವಂಚನೆಗೆ ಒಳಗಾದ ಭಾವನೆ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಇಂತಹ ಸಂದರ್ಭದಲ್ಲಿಯೂ ಸಂಘದ ಹಿರಿಯರು ಹಾಗೂ ಬಿಜೆಪಿ ನಾಯಕರು ಯಾರೂ ತಮ್ಮೊಂದಿಗೆ ಮಾತನಾಡದಿರುವುದು ನೋವುಂಟು ಮಾಡಿದೆ ಎಂದರು.

ಇತರ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ತಮಗೆ ವಿಶೇಷ ಗೌರವದ ಅಗತ್ಯವಿಲ್ಲ. ಕನಿಷ್ಠ ಗೌರವದಿಂದ ಮಾತನಾಡಿದ್ದರೂ ಸಾಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಜನರ ಒತ್ತಾಯದಿಂದ ಸ್ಪರ್ಧೆ
2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದ ಹಿಂದೆ ತಮ್ಮ ರಾಜಕೀಯ ಅನುಭವ ಹಾಗೂ ಬೆಂಬಲಿಗರ ಒತ್ತಾಯವೂ ಇದೆ ಎಂದು ರಘುಪತಿ ಭಟ್ ತಿಳಿಸಿದರು. ಕ್ಷೇತ್ರದ ಜನರು ತಮ್ಮನ್ನು ಸೋಲಿಸಿಲ್ಲ; ಪಕ್ಷವೇ ಟಿಕೆಟ್ ತಪ್ಪಿಸಿದೆ ಎಂಬ ಅಭಿಪ್ರಾಯ ಜನರಲ್ಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ ಎಂದರು.

ಜನರು ಸ್ಪರ್ಧಿಸಬೇಡಿ, ಮನೆಯಲ್ಲೇ ಇರಿ ಎಂದು ಹೇಳಿದರೆ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ. ಆದರೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಜನರಿಗೆ ನೆರವಾಗಲು ಜನಪ್ರತಿನಿಧಿಯಾಗಿಯೇ ಇರಬೇಕೆಂದಿಲ್ಲ. ಜನರ ಕೆಲಸ ಮಾಡಲು ಬೇರೆ ಮಾರ್ಗಗಳೂ ಇವೆ ಎಂದು ಹೇಳಿದರು.