ಇನ್‌ಸ್ಟಾಗ್ರಾಮ್‌ನಲ್ಲಿ ಸ್ವೀಟು ಕೇಳಿದ ಕಂಟೆಂಟ್ ಕ್ರಿಯೇಟರ್ ಗೆ ಫಾಲೋವರ್ಸ್ ಕೊಟ್ಟರು ಯಾರೂ ಕೊಡದ ಟ್ರೀಟು: ‘ನಿನಗಿದು ಬೇಕಿತ್ತಾ ಮಗನೇ’ಎನ್ನುವಂತಾಯ್ತು ವೀರಮಣಿ ಸ್ಥಿತಿ!

ಮಧುರೈ: ದೀಪಾವಳಿಗೆ ಸಿಹಿತಿಂಡಿ ತಿನ್ನುವ ಆಸೆಯಿಂದ ತನ್ನ ವಿಳಾಸ ಹಂಚಿಕೊಂಡು, ಫಾಲೋವರ್ಸ್‌ಗೆ ಸ್ವೀಟ್ ಬಾಕ್ಸ್ ಕಳುಹಿಸುವಂತೆ ಮನವಿ ಮಾಡಿದ್ದ ತಮಿಳುನಾಡಿನ ಕಂಟೆಂಟ್ ಕ್ರಿಯೇಟರ್ ಒಬ್ಬರು ಇದೀಗ ಪೇಚೆಗೆ ಸಿಲುಕಿದ್ದಾರೆ. ಒಂದು ಸ್ವೀಟ್ ಬಾಕ್ಸ್ ಕೇಳಿದ್ದಕ್ಕೆ ಅವರ ಮನೆಗೆ ಸಿಹಿತಿಂಡಿಗಳ ಬದಲಿಗೆ ಟಿವಿ, ಫ್ರಿಜ್‌ ಸೇರಿದಂತೆ ವಿವಿಧ ವಸ್ತುಗಳು ಕ್ಯಾಶ್ ಆನ್ ಡೆಲಿವರಿ ಮೂಲಕ ಬರತೊಡಗಿದ್ದು, ಕೊನೆಗೆ ಅವರು ಕಣ್ಣೀರಿಡುತ್ತಾ ನೆರವು ಬೇಡುವಂತಾಗಿದೆ.

ತಲೆನೋವಾಯ್ತು ಮನವಿ:

ಮಧುರೈ ಮೂಲದ ವೀರಮಣಿ ಎಂಬ ಕಂಟೆಂಟ್ ಕ್ರಿಯೇಟರ್‌ಗೆ ದೀಪಾವಳಿಯ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ತಿನ್ನುವ ಆಸೆಯಾಗಿತ್ತು. ಈ ವಿಚಾರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫಾಲೋವರ್ಸ್‌ ಜೊತೆ ಹೇಳಿಕೊಂಡಿದ್ದರು. ಅಲ್ಲದೆ, ವಿಡಿಯೊದಲ್ಲಿ ತಮ್ಮ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ನೀಡಿ, ಯಾರಾದರೂ ತನಗೆ ಒಂದು ಬಾಕ್ಸ್ ಸಿಹಿತಿಂಡಿ ಕಳುಹಿಸಬಹುದೇ ಎಂದು ಕೇಳಿದ್ದರು.

ಆದರೆ, ಈ ಮನವಿಯೇ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವೀರಮಣಿ ಅವರ ಮನೆಗೆ ವಿವಿಧ ವಸ್ತುಗಳ ಆರ್ಡರ್‌ಗಳು ಬರತೊಡಗಿವೆ. ಆರಂಭದಲ್ಲಿ ಸಿಹಿತಿಂಡಿಗಳ ಬಾಕ್ಸ್‌ಗಳು ಬಂದಿದ್ದರೆ, ಬಳಿಕ ಹಣ್ಣು, ಹಾಲು, ತರಕಾರಿ, ಬಟ್ಟೆ ಹಾಗೂ ಆಹಾರ ಪದಾರ್ಥಗಳ ಜೊತೆಗೆ ಟಿವಿ ಮತ್ತು ರೆಫ್ರಿಜರೇಟರ್‌ಗಳನ್ನೂ ಕಳುಹಿಸಲಾಗಿದೆ. ವಿಶೇಷವೆಂದರೆ, ಈ ಎಲ್ಲ ವಸ್ತುಗಳೂ ಕ್ಯಾಶ್ ಆನ್ ಡೆಲಿವರಿ ಮೂಲಕ ಬಂದಿದ್ದರಿಂದ ಅವುಗಳನ್ನು ಸ್ವೀಕರಿಸಲು ಹಣ ಪಾವತಿಸುವಂತೆ ಡೆಲಿವರಿ ಸಿಬ್ಬಂದಿ ಕೇಳತೊಡಗಿದ್ದಾರೆ.

ಅಮೆಜಾನ್, ಫ್ಲಿಪ್‌ಕಾರ್ಟ್, ಝೆಪ್ಟೊ ಸೇರಿದಂತೆ ವಿವಿಧ ಇ-ಕಾಮರ್ಸ್ ವೇದಿಕೆಗಳ ಮೂಲಕ ನಿರಂತರವಾಗಿ ಆರ್ಡರ್‌ಗಳು ಬರುತ್ತಿದ್ದರಿಂದ ವೀರಮಣಿ ಕಂಗಾಲಾಗಿದ್ದಾರೆ. ಡೆಲಿವರಿ ಸಿಬ್ಬಂದಿಗೆ ತಾನು ಊರಿನಲ್ಲಿ ಇಲ್ಲ ಅಥವಾ ಮನೆ ಬದಲಾಯಿಸಿದ್ದೇನೆ ಎಂದು ಹೇಳಿ ಆರ್ಡರ್‌ಗಳನ್ನು ನಿರಾಕರಿಸುವ ಪರಿಸ್ಥಿತಿ ಎದುರಾಗಿದೆ.

ಕೊನೆಗೆ ಮತ್ತೊಂದು ವಿಡಿಯೊ ಹಂಚಿಕೊಂಡ ಅವರು, ದಯವಿಟ್ಟು ತನಗಾಗಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಬೇಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಒಂದು ಸ್ವೀಟ್ ಬಾಕ್ಸ್ ಕೇಳಿದ್ದಕ್ಕೆ ಇಷ್ಟೆಲ್ಲಾ ಕಿರುಕುಳ ನೀಡುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೇ ಈ ಕಾಟ ನಿಂತಿಲ್ಲ. ಯಾರೋ ವೀರಮಣಿ ಅವರ ವಿವರಗಳನ್ನು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅವರ ಹೆಸರಿನಲ್ಲಿ ಉಚಿತ ಕಿಡ್ನಿ ದಾನಕ್ಕಾಗಿ ನೋಂದಣಿ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಕಿಡ್ನಿ ದಾನದ ವಿಚಾರವಾಗಿ ಕರೆಗಳು ಬರತೊಡಗಿದಾಗ, ಪರಿಸ್ಥಿತಿ ಕೈಮೀರಿರುವುದು ಅವರಿಗೆ ಅರಿವಾಗಿದೆ. ಮತ್ತೊಂದು ವಿಡಿಯೊದಲ್ಲಿ, “ನನ್ನನ್ನು ಬಿಟ್ಟುಬಿಡಿ, ನಿಮ್ಮ ಸ್ವೀಟ್ಸ್ ಬೇಡ, ಏನೂ ಬೇಡ. ದಯವಿಟ್ಟು ಬದುಕಲು ಬಿಡಿ” ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

ಇತ್ತ, ನಿರಂತರವಾಗಿ ಬರುತ್ತಿದ್ದ ಆರ್ಡರ್‌ಗಳನ್ನು ವೀರಮಣಿ ನಿರಾಕರಿಸಿದ್ದರಿಂದ ಡೆಲಿವರಿ ಸಿಬ್ಬಂದಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ತಮಾಷೆಯ ಹೆಸರಿನಲ್ಲಿ ಇತರರ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ಮೂರೂವರೆ ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ವೀರಮಣಿ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಸಕ್ರಿಯರಾಗಿದ್ದಾರೆ.