ರೇಣುಕಾಸ್ವಾಮಿ ಕೊಲೆ ಪ್ರಕರಣ: ಮದ್ವೆ ಖುಷಿಯಲ್ಲಿದ್ದ ನಟರಾದ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಶಾಕ್!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಪ್ರಕರಣದ ಸಾಕ್ಷಿಗಳಾಗಿರುವ ಇಬ್ಬರೂ ನಟರು, ಕೊಲೆಗೂ ಮುನ್ನ ಆರೋಪಿಯಾಗಿರುವ ನಟ ದರ್ಶನ್ ಭಾಗವಹಿಸಿದ್ದ ಬೆಂಗಳೂರಿನ ಸ್ಟೋನಿ ಬ್ರೂಕ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯ ವೇಳೆ ಸಾಕ್ಷ್ಯ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ 59ನೇ ಸಿಸಿಹೆಚ್ ನ್ಯಾಯಾಲಯ, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ ಸಮನ್ಸ್ ಜಾರಿಗೊಳಿಸಿದೆ. ನಟ ಚಿಕ್ಕಣ್ಣ ಅವರಿಗೆ CW-80 ಹಾಗೂ ನಟ ಯಶಸ್ ಸೂರ್ಯ ಅವರಿಗೆ CW-98 ಎಂದು ಸಮನ್ಸ್ ನೀಡಲಾಗಿದೆ.

ಸ್ಟೋನಿ ಬ್ರೂಕ್‌ನಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್ ಸೇರಿದಂತೆ ಪ್ರಕರಣದ ಆರೋಪಿಗಳು ಭಾಗಿಯಾಗಿದ್ದ ಹಿನ್ನೆಲೆಯಲ್ಲಿ, ಆ ದಿನ ನಡೆದ ಘಟನೆಗಳ ಕುರಿತು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಲು ಇಬ್ಬರು ನಟರನ್ನು ವಿಚಾರಣೆಗೆ ಕರೆಯಲಾಗಿದೆ.