ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ

ಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಜೀವನದ ಕೊನೆಯ ಹಂತದಲ್ಲಿರುವವರಿಗೆ ನೋವುರಹಿತ ಹಾಗೂ ಗೌರವಯುತ ಅಂತಿಮ ದಿನಗಳನ್ನು ಕಳೆಯಲು ಮಾಹೆ ವಿಶ್ವವಿದ್ಯಾಲಯದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ಉಚಿತವಾಗಿ ಉತ್ಕೃಷ್ಟ ಉಪಶಾಮಕ ಆರೈಕೆ ಸೇವೆ ಒದಗಿಸುತ್ತಿದೆ.

ಕಳೆದ ಒಂದು ವರ್ಷದಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ ನೀಡಲಾಗಿದ್ದು, 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಅಧ್ಯಕ್ಷ ಹಾಗೂ ಮಾಹೆ ಟ್ರಸ್ಟ್ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರ ಪರಿಕಲ್ಪನೆಯಂತೆ ಎಂಎಚ್‌ಆರ್‌ಸಿ ರೂಪುಗೊಂಡಿದೆ.

ಹಾವಂಜೆ ಸಮೀಪ 12 ಎಕರೆ ಪ್ರದೇಶದಲ್ಲಿ ಆರಂಭಗೊಂಡಿರುವ ಕೇಂದ್ರವು ಮೊದಲು 35 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಇದೀಗ 105 ಹಾಸಿಗೆಗಳಿಗೆ ವಿಸ್ತರಿಸಲಾಗಿದೆ. ಕೇಂದ್ರದ ನಿರ್ವಹಣೆಗೆ ವಾರ್ಷಿಕ ₹6 ಕೋಟಿಗೂ ಅಧಿಕ ವೆಚ್ಚವಾಗುತ್ತಿದ್ದು, ದಾನಿಗಳ ಸಹಕಾರದಿಂದ ಸೇವೆ ಮುಂದುವರಿಸಲಾಗುತ್ತಿದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಶಿಫಾರಸಿನ ಮೇರೆಗೆ ರೋಗಿಗಳಿಗೆ ಇಲ್ಲಿ ಆರೈಕೆ ನೀಡಲಾಗುತ್ತಿದೆ ಎಂದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ದೇಶದಲ್ಲಿಯೇ ಅತ್ಯಂತ ದೊಡ್ಡ ಹಾಸ್ಪಿಸ್ ಮತ್ತು ರೆಸ್ಟೈಟ್ ಸೆಂಟರ್‌ಗಳಲ್ಲಿ ಇದು ಪ್ರಮುಖವಾಗಿದೆ. ಇಲ್ಲಿ ರೋಗಿಗಳಿಗೆ ಚಿಕಿತ್ಸೆಯ ಬದಲಾಗಿ ಆರೈಕೆಗೆ ಆದ್ಯತೆ ನೀಡಲಾಗುತ್ತದೆ. ಥೆರಪಿ ಜತೆಗೆ ರೋಗಿಗಳ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ಹಾಗೂ ಅಗತ್ಯ ಮಾನಸಿಕ ಬೆಂಬಲವನ್ನೂ ನೀಡಲಾಗುತ್ತದೆ ಎಂದರು.

ಅ. 10ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’:

ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಎಂಎಚ್‌ಆರ್‌ಸಿ ವತಿಯಿಂದ ಅ. 10ರಂದು ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬ ಧ್ಯೇಯವಾಕ್ಯದಡಿ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಜಾಗೃತಿ ಜಾಥಾ ಆಯೋಜಿಸಲಾಗಿದೆ.

ವಿವಿಧ ಕ್ಲಬ್‌ಗಳ ಓಟಗಾರರು ಹಾಗೂ ಸೈಕ್ಲಿಸ್ಟ್‌ಗಳು ಅಂದು ಮುಂಜಾನೆ 5.15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ವೃತ್ತದಿಂದ ಸೈಕಲ್‌ನಲ್ಲಿ ಹೊರಟು ಸುಮಾರು 68 ಕಿ.ಮೀ. ಕ್ರಮಿಸಿ ಮಣಿಪಾಲದ ಎಂಎಚ್‌ಆರ್‌ಸಿ ತಲುಪಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಂಎಚ್‌ಆರ್‌ಸಿ ನಿರ್ದೇಶಕಿ ಜೇಕಬ್, ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್, ಮಾಹೆ ಸಹ ಕುಲಪತಿ ಮೇಜರ್ ಜನರಲ್ (ನಿವೃತ್ತ) ಡಾ. ಮ್ಯಾಥ್ಯೂಸ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿ ಸಂಶೋಧನಾ ನಿರ್ದೇಶಕ ಹಾಗೂ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಉಪಸ್ಥಿತರಿದ್ದರು.