ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆ ಎತ್ತಿಹಿಡಿಯಲು ರಾಜ್ಯ ಸರ್ಕಾರವು ಬೆಂಗಳೂರು ಜಾತ್ರೆಯನ್ನು ನಡೆಸಲಿದೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಬೆಂಗಳೂರು:ರಾಜಧಾನಿಯಾದ ಬೆಂಗಳೂರು ಮಹಾನಗರದಲ್ಲಿ ಇದೇ ಮೊದಲ ಬಾರಿಗೆ ಸಡಗರ ಸಂಭ್ರಮದ 10 ದಿನಗಳ “ಬೆಂಗಳೂರು ಜಾತ್ರೆ” ಈ ವರ್ಷದ ಕೊನೆಯ ತಿಂಗಳಲ್ಲಿ ಜರುಗಲಿದೆ.
ನಗರದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆ ಎತ್ತಿಹಿಡಿಯಲು ರಾಜ್ಯ ಸರ್ಕಾರವು ಬೆಂಗಳೂರು ಜಾತ್ರೆಯನ್ನು ಡಿಸೆಂಬರ್ 4 ರಿಂದ 13 ರವರೆಗೆ ನಡೆಸಲಿದೆ” ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಬಿಎ ಕೇಂದ್ರ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
“ಬೆಂಗಳೂರು ಜಾತ್ರೆಗೆ ಜಿಬಿಎ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಬ್ಬದ ಆಚರಣೆ ನಡೆಯಲಿದೆ. 300ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಅಂದಾಜು 15 ರಿಂದ 20 ಕೋಟಿ ರೂ. ವೆಚ್ಚ ತಗುಲಲಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
“ದಿನನಿತ್ಯವೂ ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವ ಸರ್ಕಾರಕ್ಕೆ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡ ಜನ ಸಾಮಾನ್ಯರ ಬದುಕಿನ ಮತ್ತೊಂದು ಅನುಭವದ ಅನುಭೂತಿಯನ್ನು ನೀಡುವ ಹಾಗೂ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇರುತ್ತದೆ. ಆ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳ 4 ರಿಂದ 13ರವರೆಗೆ 10 ದಿನಗಳ ಕಾಲ “ಬೆಂಗಳೂರು ಜಾತ್ರೆ” ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
“ಬೆಂಗಳೂರು ನಗರದಲ್ಲಿ ಪ್ರತಿದಿನವೂ ನಾನಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ರಸ್ತೆ, ನೀರು ಹಾಗೂ ಸಂಚಾರ ಸುಧಾರಣೆಯ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರತಿದಿನದ ಕಡ್ಡಾಯ ಕಾರ್ಯವಾಗಿದೆ. ಆದರೆ, ಕೇವಲ ಮೂಲಭೂತ ಸೌಕರ್ಯಗಳಷ್ಟೇ ಜೀವನವಲ್ಲ. ನಾಗರಿಕರ ಜೀವನದ ಗುಣಮಟ್ಟ ಉತ್ತಮವಾಗಿರಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ನಮ್ಮ ಪರಂಪರೆ ಇತಿಹಾಸದ ಆಸ್ವಾದನೆಯೂ ಅಷ್ಟೇ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬೆಂಗಳೂರು ಜಾತ್ರೆಕಾರ್ಯಕ್ರಮ ಆಯೋಜನೆಗೆ ಮುಂದಾಗಿದೆ” ಎಂದು ತಿಳಿಸಿದರು.
“ರಾಜ್ಯ ಸರ್ಕಾರ ಆಗಸ್ಟ್ 15 ರಂದು ಮೊಟ್ಟ ಮೊದಲ ಬಾರಿಗೆ “ಫ್ರೀಡಂ ಹಬ್ಬ” ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮ ಜನರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅಲ್ಲದೆ. ದಿನನಿತ್ಯ ಯಾಂತ್ರಿಕ ಬದುಕಿನಿಂದ ಬೇಸತ್ತಿದ್ದ ಕುಟುಂಬಗಳಿಗೆ ಮಕ್ಕಳ ಜೊತೆ ದಿನವೊಂದನ್ನು ಸಂತೋಷವಾಗಿ ಕಳೆಯಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿತ್ತು. ನಗರದಲ್ಲಿ ಜನರನ್ನೂ ಒಳಗೊಳ್ಳುವ ಇಂತಹ ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯತೆ ಬಗ್ಗೆ ಮನಗಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಿಸೆಂಬರ್ ತಿಂಗಳಲ್ಲಿ ಇದೇ ರೀತಿಯ “ಬೆಂಗಳೂರು ಹಬ್ಬ” ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅದರಂತೆ ಇದೀಗ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
“ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನೂ ಈ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಖಾಸಗಿ ಸಂಸ್ಥೆಗಳು, ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಇದನ್ನು ಪ್ರತಿವರ್ಷ ಮುಂದುವರಿಸಿಕೊಂಡು ಹೋದರೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿ, ಬೆಂಗಳೂರಿನ ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಹೊಸ ಶಕ್ತಿ ಸಿಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ ರಾಜಧಾನಿಯಾಗಿಸುವ ಆಶಯ:“ಬೆಂಗಳೂರು ನಗರ ಈಗಾಗಲೇ ತಂತ್ರಜ್ಞಾನ ಹಾಗೂ ಆರ್ಥಿಕ ರಂಗದಲ್ಲಿ ದೇಶಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮಾದರಿ ಕೇಂದ್ರವಾಗಿದೆ. ಅದೇ ರೀತಿ ಸಂಸ್ಕೃತಿ, ಸಾಹಿತ್ಯ ಹಾಗೂ ಜೀವನ ಶೈಲಿಯಲ್ಲೂ ಬೆಂಗಳೂರು ಅತ್ಯುತ್ತಮ ನಗರವಾಗಬೇಕೆಂಬುದು ಸರ್ಕಾರದ ಆಶಯವಾಗಿದೆ. ಇತಿಹಾಸದುದ್ದಕ್ಕೂ ನಮ್ಮ ಆಡಳಿತ ವ್ಯವಸ್ಥೆ ಕಲೆ ಮತ್ತು ಸಾಹಿತ್ಯಕ್ಕೆ ‘ರಾಜಾಶ್ರಯ’ ನೀಡುತ್ತಾ ಬಂದಿದೆ. 21ನೇ ಶತಮಾನದಲ್ಲಿ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಕಲಾವಿದರಿಗೆ ವೇದಿಕೆ ನಿರ್ಮಿಸಿಕೊಡುವುದು ಮತ್ತು ಜನರಿಗೆ ಕಲೆಯನ್ನು ಆಸ್ವಾದಿಸುವ ಸೌಲಭ್ಯ ಒದಗಿಸುವುದು ಮತ್ತು ಆ ಮೂಲಕ ನಮ್ಮ ಜನಪದ ಸಾಂಸ್ಕೃತಿಕ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಜಿಬಿಎ ನೋಡಲ್ ಸಂಸ್ಥೆ–ಇಲಾಖೆಗಳ ಸಮಗ್ರ ಒಕ್ಕೂಟ:“ಈ ಬೃಹತ್ ಕಾರ್ಯಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಖ್ಯ ನೋಡಲ್ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸಲಿದೆ. ಇದರ ಜೊತೆಗೆ ಬಿಎಂಆರ್ಸಿಎಲ್ (ಮೆಟ್ರೋ), ಕರ್ನಾಟಕ ರಾಜ್ಯ ಪೊಲೀಸ್ (ಸಂಚಾರ ಹಾಗೂ ಭದ್ರತೆ), ಬಿಡಬ್ಲ್ಯೂಎಸ್ಎಸ್ಬಿ (ಜಲಮಂಡಳಿ), ಬಿಡಿಎ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದಾಗಿ ಕೈಜೋಡಿಸಿ ಕಾರ್ಯಕ್ರಮವನ್ನು ಸಂಘಟಿಸಲಿವೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಶೈಲಿ ಹಾಗೂ ಕಾರ್ಯತಂತ್ರಗಳು:
ಬೆಂಗಳೂರಿನವರಿಗಾಗಿ ಬೆಂಗಳೂರಿನವರಿಂದ ಆಚರಣೆ:ಇದು ಕೇವಲ ಸರ್ಕಾರದ ಅಧಿಕೃತ ಕಾರ್ಯಕ್ರಮ ಮಾತ್ರವಲ್ಲದೆ ಸಂಪೂರ್ಣವಾಗಿ ನಾಗರಿಕರ ಹಬ್ಬವಾಗಲಿದೆ. ನಗರದಲ್ಲಿರುವ ಪ್ರಮುಖ ಐಟಿ-ಬಿಟಿ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಲಾ ಗ್ಯಾಲರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಹೋಟೆಲ್ ಅಸೋಸಿಯೇಷನ್ಗಳಿಗೆ ಪತ್ರ ಬರೆಯಲಾಗುತ್ತಿದ್ದು, ಅವರವರ ಕೇಂದ್ರಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಲು ಮತ್ತು ಪ್ರತಿಯೊಂದು ಸಂಸ್ಥೆಯೂ ತನ್ನ ಶಕ್ತಿಗೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಮನವಿ ಮಾಡಲಾಗುತ್ತದೆ.
ಆಹಾರ ಸಂಸ್ಕೃತಿ ಮತ್ತು ಊರ ಹಬ್ಬ:ಹೋಟೆಲ್ ಅಸೋಸಿಯೇಷನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ವೈವಿಧ್ಯಗಳನ್ನು (Food Festivals) ಸಾರ್ವಜನಿಕರಿಗೆ ಪರಿಚಯಿಸಲಾಗುವುದು. ಜೊತೆಗೆ ಬೆಂಗಳೂರಿನಲ್ಲಿ ಈಗಲೂ ಕೆಲವು ಹಳೆಯ ಊರುಗಳು ತಮ್ಮ ಪರಂಪರೆ ಸಂಸ್ಕೃತಿ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಆ ಹಳೆಯ ಊರುಗಳ (ಪೇಟೆ/ಪರಂಪರೆ ಪ್ರದೇಶಗಳು) ಪ್ರಮುಖರೊಂದಿಗೆ ಮಾತನಾಡಿ, ಸ್ಥಳೀಯ ‘ಊರ ಹಬ್ಬ’ಗಳನ್ನು ಆಯೋಜಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಐದು ಪಾಲಿಕೆಗಳಲ್ಲೂ ಕಾರ್ಯಕ್ರಮ:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಹಯೋಗದಲ್ಲಿ ರಸ್ತೆ, ಉದ್ಯಾನ, ಆಟದ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಕಲಾ ಪ್ರದರ್ಶನ, ಮಕ್ಕಳ ಚಟುವಟಿಕೆ ಮತ್ತು ಬೀದಿ ಉತ್ಸವಗಳನ್ನು ನಡೆಸುವ ಯೋಜನೆ ಇದೆ.
ಸ್ಥಳೀಯ ವಿನ್ಯಾಸಕರ ಸಹಯೋಗದಲ್ಲಿ ಪ್ರತಿ ಪಾಲಿಕೆಯೂ ತನ್ನದೇ ಆದ ಸ್ಥಳೀಯ ಬ್ರ್ಯಾಂಡ್ ಗುರುತು ರೂಪಿಸುವ ಮೂಲಕ ಬಸ್ ನಿಲ್ದಾಣ, ಬೀದಿ ದೀಪ, ಸಾರ್ವಜನಿಕ ಆಸನ ಸೇರಿದಂತೆ ನಾಗರಿಕ ಸೌಲಭ್ಯಗಳ ಸೌಂದರ್ಯೀಕರಣಕ್ಕೂ ಜಾತ್ರೆಯನ್ನು ಬಳಸಿಕೊಳ್ಳುವ ಚಿಂತನೆ ಮಾಡಲಾಗಿದೆ.
ಮೆಟ್ರೋದಿಂದ ಬಸ್ ವರೆಗೆ ಜಾತ್ರೆಯ ಸ್ಪರ್ಶ:ಬಿಎಂಆರ್ಸಿಎಲ್ ಮೆಟ್ರೋ ನಿಲ್ದಾಣಗಳ ಕಾನ್ಕೋರ್ಸ್ಗಳಲ್ಲಿ ಕಲಾ-ಸಾಂಸ್ಕೃತಿಕ ಕಾರ್ಯಕ್ರಮ, ಆಫ್-ಪೀಕ್ ಅವಧಿಯಲ್ಲಿ ಸಂಗೀತ ಪ್ರದರ್ಶನದಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಿಎಂಟಿಸಿ ಬಸ್ಗಳಿಗೆ ಬೆಂಗಳೂರು ಜಾತ್ರೆಯ ಬ್ರ್ಯಾಂಡಿಂಗ್ ಮಾಡುವ ಮೂಲಕ ನಗರಾದ್ಯಂತ ಸಂಚರಿಸುವ ಪ್ರಚಾರ ಮಾಧ್ಯಮವನ್ನಾಗಿ ಬಳಸುವ ಉದ್ದೇಶವಿದೆ.
ಬಿಡಬ್ಲ್ಯೂಎಸ್ಎಸ್ಬಿ ಕಟ್ಟಡಗಳು, ನೀರಿನ ಟ್ಯಾಂಕ್ಗಳು ಸೇರಿದಂತೆ ವಿಶಿಷ್ಟ ಸಾರ್ವಜನಿಕ ಮೂಲಸೌಕರ್ಯಗಳನ್ನು ಕಲಾ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ.
ಶಿಕ್ಷಣ, ವಿಜ್ಞಾನ, ಕಲೆಗೂ ವೇದಿಕೆ:ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಕಲಾ ಪ್ರದರ್ಶನ, ವಿಜ್ಞಾನ-ನವೋದ್ಯಮ ಪ್ರದರ್ಶನ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಅವಕಾಶ ದೊರೆಯಲಿದೆ. IISc, IIM ಸೇರಿದಂತೆ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, NGMA, ಚಿತ್ರಕಲಾ ಪರಿಷತ್, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಪ್ಲಾನೆಟೇರಿಯಂ ಮತ್ತಿತರ ಸಂಸ್ಥೆಗಳೂ ಭಾಗಿಯಾಗುವ ನಿರೀಕ್ಷೆಯಿದೆ.
ರಂಗಶಂಕರ, ಜಾಗೃತಿ, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, MAP, IME, ಸಭಾ, ಅಟ್ಟ ಗಲಾಟಾ ಸೇರಿದಂತೆ ಕಲೆ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರದ ಸಂಸ್ಥೆಗಳು ತಮ್ಮದೇ ಕಾರ್ಯಕ್ರಮಗಳನ್ನು ಜಾತ್ರೆಯ ಸಮಗ್ರ ಕ್ಯಾಲೆಂಡರ್ನ ಅಡಿ ನಡೆಸಬಹುದು.
ಆರ್ಡಬ್ಲ್ಯೂಎ- ಎನ್ಜಿಓ ಕಾರ್ಪೊರೇಟ್ಗಳಿಗೂ ಆಹ್ವಾನ:ಆರ್ಡಬ್ಲ್ಯೂಎಗಳು ಸ್ಥಳೀಯ ನಾಗರಿಕರನ್ನು ಕಾರ್ಯಕ್ರಮಗಳಿಗೆ ಸಂಪರ್ಕಿಸುವ ಸೇತುವೆಯಾಗಲಿದ್ದು, ಉದ್ಯಾನ, ಕೆರೆಗಳ ಸುತ್ತಮುತ್ತ ಹಾಗೂ ಬಡಾವಣೆಗಳಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತದೆ. ಐಟಿ ಕಂಪನಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಕ್ಯಾಂಪಸ್ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಉದ್ಯೋಗಿಗಳ ಪ್ರತಿಭಾ ಪ್ರದರ್ಶನ, ವಿನ್ಯಾಸ ಪ್ರದರ್ಶನ ಹಾಗೂ ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
ಎನ್ಜಿಒಗಳು, ಫೌಂಡೇಶನ್ಗಳು ಮತ್ತು ಸಿಎಸ್ಆರ್ ಸಂಸ್ಥೆಗಳು ತಮ್ಮ ಸಾಮಾಜಿಕ ಕಾರ್ಯಗಳನ್ನು ಜನರಿಗೆ ಪರಿಚಯಿಸುವ ವೇದಿಕೆಯಾಗಿಯೂ ಜಾತ್ರೆಯನ್ನು ಬಳಸಿಕೊಳ್ಳಬಹುದು.
ಸರ್ಕಾರದ್ದು ಸಮನ್ವಯದ ಪಾತ್ರ:ಜಾತ್ರೆಯಲ್ಲಿ ಸರ್ಕಾರವು ಎಲ್ಲ ಕಾರ್ಯಕ್ರಮಗಳನ್ನು ನೇರವಾಗಿ ಆಯೋಜಿಸುವ ಬದಲು ಸಕ್ರಿಯಗೊಳಿಸುವ, ಸಮನ್ವಯಗೊಳಿಸುವ ಮತ್ತು ಅಗತ್ಯ ಸೌಲಭ್ಯ ಒದಗಿಸುವ ಪಾತ್ರ ವಹಿಸಲಿದೆ. ಭಾಗವಹಿಸುವ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವುದು, ಅನುಮತಿ ಮತ್ತು ಸಾರ್ವಜನಿಕ ಮೂಲಸೌಕರ್ಯ ಬಳಕೆಯಲ್ಲಿ ಸಮನ್ವಯ, ಏಕೀಕೃತ ಬ್ರ್ಯಾಂಡಿಂಗ್, ಅಧಿಕೃತ ವೆಬ್ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆ, ಸಮಗ್ರ ಕಾರ್ಯಕ್ರಮ ಕ್ಯಾಲೆಂಡರ್ ರೂಪಿಸುವ ಕಾರ್ಯ ನಡೆಯಲಿದೆ.
ಪ್ರತಿಯೊಂದು ಸಂಸ್ಥೆಯೂ ತನ್ನದೇ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಬೆಂಗಳೂರು ಜಾತ್ರೆ ಅವುಗಳಿಗೆ ಸಾಮಾನ್ಯ ಗುರುತು, ದೃಶ್ಯತೆ ಮತ್ತು ಸಮನ್ವಯದ ವೇದಿಕೆ ಒದಗಿಸಲಿದೆ.
ಅಂತರರಾಜ್ಯ ಕಲಾತಂಡಗಳ ಆಹ್ವಾನ:ನಮ್ಮ ನಾಡಿನ ಕಲೆಯನ್ನು ಪ್ರಸರಿಸುವ ಜೊತೆಗೆ, ಭಾರತದ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳನ್ನು ಬೆಂಗಳೂರಿಗೆ ಆಹ್ವಾನಿಸಲು ವಿವಿಧ ರಾಜ್ಯ ಸರ್ಕಾರಗಳಿಗೆ ಮನವಿ ಕಳುಹಿಸಲಾಗುವುದು.
300ಕ್ಕೂ ಹೆಚ್ಚು ಉಚಿತ ಕಾರ್ಯಕ್ರಮಗಳು:10 ದಿನಗಳ ಕಾಲ ಒಟ್ಟು 300ಕ್ಕೂ ಹೆಚ್ಚು ಕಲೆ, ಸಾಹಿತ್ಯ, ಸಂಗೀತ, ನಾಟಕ, ಪರಿಸರ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವ ಗುರಿ ಹೊಂದಲಾಗಿದೆ. ಇದರಲ್ಲಿ ಚಿತ್ರರಂಗದ ಪ್ರಮುಖರನ್ನೂ ಒಳಗೊಳ್ಳಲು ಯತ್ನಿಸಲಾಗುವುದು. ಚಿತ್ರರಂಗದ ಪ್ರಮುಖರು ತಾವೇ ಮುಂದಾಗಿ ಕಾರ್ಯಕ್ರಮಕ್ಕೆ ಅಗತ್ಯವಾದ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದ ಸಚಿವರು, ಸರ್ಕಾರದಿಂದ ಆಯೋಜಿಸುವ ಯಾವುದೇ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.
ವಿಶೇಷ ವೆಬ್ಸೈಟ್ ಹಾಗೂ ನೋಂದಣಿ ವ್ಯವಸ್ಥೆ:ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಯಾವ ಕಾರ್ಯಕ್ರಮ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕ ವೆಬ್ಸೈಟ್ ಮೂಲಕ ಮುಂಚಿತವಾಗಿಯೇ ಪ್ರಕಟಿಸಲಾಗುವುದು. ಸಣ್ಣ ಕಾರ್ಯಕ್ರಮಗಳಿಗೆ ನೇರ ಪ್ರವೇಶವಿದ್ದು, ಕೇವಲ ಬೃಹತ್ ಮಟ್ಟದ ಕಾರ್ಯಕ್ರಮಗಳಿಗೆ ಮಾತ್ರ ವೆಬ್ಸೈಟ್ನಲ್ಲಿ ಮುಂಗಡ ನೋಂದಣಿ (Registration) ವ್ಯವಸ್ಥೆ ಮಾಡಲಾಗುತ್ತದೆ.
ಸಮಾರೋಪ ಸಮಾರಂಭ:ಪ್ರತಿಯೊಂದು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಕಾರ್ಯಕ್ರಮಗಳು ನಡೆಯುವುದರ ಜೊತೆಗೆ, ನಗರದ ಮಧ್ಯಭಾಗದಲ್ಲಿ (Central Location) ಪ್ರಮುಖ ಕಾರ್ಯಕ್ರಮಗಳು ಜರುಗಲಿವೆ. ಹಬ್ಬದ ಕೊನೆಯ ದಿನ (ಡಿಸೆಂಬರ್ 13) ಅತ್ಯಂತ ವಿಜೃಂಭಣೆಯ ಬೃಹತ್ ಸಮಾರೋಪ ಕಾರ್ಯಕ್ರಮ ಆಯೋಜಿಸುವ ಯೋಜನೆಯಿದೆ.
ಆಯವ್ಯಯ ಹಾಗೂ ಅನುದಾನ ಹಂಚಿಕೆ:ಈ ಯೋಜನೆಯ ಅನುಷ್ಠಾನಕ್ಕೆ ಅಂದಾಜು ರೂ. 15 ರಿಂದ 20 ಕೋಟಿ ವ್ಯಯವಾಗುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯವ್ಯಯದಲ್ಲಿ ಮೀಸಲಿಡಲಾದ 5 ಕೋಟಿ ರೂ.ಗಳ ಜೊತೆಗೆ, 5 ನಗರ ಪಾಲಿಕೆಗಳು ತಲಾ 1 ಕೋಟಿ ರೂ. ನೀಡಲಿವೆ. ಉಳಿದ ಅನುದಾನವನ್ನು ಮೆಟ್ರೋ, ಬೆಸ್ಕಾಂ, ಜಲಮಂಡಳಿ ಹಾಗೂ ಬಿಡಿಎ ಸಂಸ್ಥೆಗಳು ಹಂಚಿಕೊಳ್ಳಲಿವೆ.
ಸಂಚಾರ ನಿರ್ವಹಣೆ ಹಾಗೂ ಭದ್ರತೆ:ನಾಗರಿಕರಿಗೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಸಣ್ಣ ಕಾರ್ಯಕ್ರಮಗಳಿಗೂ ಅಗತ್ಯ ಭದ್ರತೆ ಒದಗಿಸಲಾಗುವುದು. ಬೃಹತ್ ಕಾರ್ಯಕ್ರಮಗಳಿಗೆ ಮಾತ್ರ ಸಂಚಾರ ಪೊಲೀಸ್ ಹಾಗೂ ಭದ್ರತಾ ಪಡೆಯೊಂದಿಗೆ ಚರ್ಚಿಸಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
“ಬೆಂಗಳೂರು ಜಾತ್ರೆ”ನಡೆಸುವ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಡಾ|ಪಿ.ಸಿ. ಜಾಫರ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.















