ಮಾಸ್ಕೋ: ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್ ಮೇಲೆ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ ನಡೆಸಿದೆ. ದಾಳಿಯ ಬಳಿಕ ಟ್ಯಾಂಕರ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರಸಿದ್ಧ ಪ್ರವಾಸಿ ತಾಣ ಸೋಚಿ ನಗರದ ಸಮೀಪ ಸಮುದ್ರದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯ ಬಳಿಕ ಟ್ಯಾಂಕರ್ ಹೊತ್ತಿ ಉರಿಯುತ್ತಿರುವ ಹಾಗೂ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಪ್ಪು ಸಮುದ್ರದ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೂ ದಾಳಿಗಳು ನಡೆಯುತ್ತಿವೆ. ರಷ್ಯಾ ಇತ್ತೀಚೆಗೆ ಧಾನ್ಯ ಸಾಗಿಸುವ ಹಡಗುಗಳು ಹಾಗೂ ಕೀವ್ನ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ, ರಷ್ಯಾದ ನಗರಗಳ ಮೇಲಿನ ನಿರಂತರ ದಾಳಿಗಳಿಗೆ ಪ್ರತಿಯಾಗಿ ರಷ್ಯಾದ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಉಕ್ರೇನ್ ಸಮರ್ಥಿಸಿಕೊಂಡಿದೆ.
ತೈಲ ಟ್ಯಾಂಕರ್ ಮೇಲಿನ ದಾಳಿಯಿಂದಾಗಿ ಕಪ್ಪು ಸಮುದ್ರದಲ್ಲಿ ಸಾಗರ ಭದ್ರತೆ ಹಾಗೂ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಮೂಡಿದೆ.















