ಅರೇಬಿಯನ್ ಸಮುದ್ರದಲ್ಲಿ ₹3,000 ಕೋಟಿ ಮೌಲ್ಯದ ಮಾದಕವಸ್ತು ಜಾಲ ಭೇದಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆ: ಐವರು ಪಾಕಿಸ್ತಾನಿ ಪ್ರಜೆಗಳ ಬಂಧನ

ಎರ್ನಾಕುಲಂ (ಕೇರಳ): ಲಕ್ಷದ್ವೀಪದ ಪಶ್ಚಿಮ ಭಾಗದ ಅರೇಬಿಯನ್ ಸಮುದ್ರದಲ್ಲಿ ಇರಾನ್ ಮೂಲದ ದೋಣಿಯೊಂದರಿಂದ ಸುಮಾರು ₹3,000 ಕೋಟಿ ಮೌಲ್ಯದ 526 ಕೆ.ಜಿ. ಮಾದಕವಸ್ತುಗಳನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರಾವಳಿ ರಕ್ಷಣಾ ಪಡೆ ವಾಯು ಹಾಗೂ ನೌಕಾ ಕಣ್ಗಾವಲು ವ್ಯವಸ್ಥೆಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿತ್ತು. ಸೆ.25ರಂದು ರೇಡಾರ್ ಮತ್ತು ವಿಮಾನಗಳ ನೆರವಿನಿಂದ ಇರಾನ್ ಮೂಲದ ಅನುಮಾನಾಸ್ಪದ ದೋಣಿಯ ಚಲನವಲನವನ್ನು ಅಧಿಕಾರಿಗಳು ಪತ್ತೆಹಚ್ಚಿ ನಿಗಾ ವಹಿಸಿದ್ದರು.

ಭದ್ರತಾ ಪಡೆಗಳ ಚಲನವಲನ ಗಮನಿಸಿದ ದೋಣಿ ವೇಗ ಹೆಚ್ಚಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿತು. ಆದರೆ ಕರಾವಳಿ ರಕ್ಷಣಾ ಪಡೆಯ ಹಡಗುಗಳು ಬೆನ್ನಟ್ಟಿ ದೋಣಿಯನ್ನು ಸುತ್ತುವರಿದು ವಶಕ್ಕೆ ಪಡೆದವು. ಬಳಿಕ ನಡೆಸಿದ ತಪಾಸಣೆಯಲ್ಲಿ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಸೇರಿದಂತೆ ಭಾರಿ ಪ್ರಮಾಣದ ನಿಷೇಧಿತ ಮಾದಕವಸ್ತುಗಳು ಪತ್ತೆಯಾಗಿವೆ.

ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆಗಳು, ದೋಣಿ, ಮಾದಕವಸ್ತುಗಳ ಸರಕು ಹಾಗೂ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಮುಂಬೈಗೆ ಕರೆತಂದಿವೆ. ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ ಸೇರಿದಂತೆ ವಿವಿಧ ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳು ಪ್ರಕರಣದ ಕುರಿತು ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆ ಮುಂದುವರಿಸಿವೆ.

ಕಡಲ ಮಾರ್ಗದ ಮೂಲಕ ನಡೆಯುವ ಮಾದಕವಸ್ತು ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಭದ್ರತಾ ಸಂಸ್ಥೆಗಳೊಂದಿಗೆ ಕರಾವಳಿ ರಕ್ಷಣಾ ಪಡೆ ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿದೆ. ಈ ಹಿಂದೆ 2025ರ ಏಪ್ರಿಲ್‌ನಲ್ಲಿ ಗುಜರಾತ್ ಕರಾವಳಿಯಲ್ಲಿ ಎಟಿಎಸ್ ಜೊತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 307 ಕೆ.ಜಿ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.