ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆ, ಉಡುಪಿಯಲ್ಲಿ ‘ದ ಕಾನ್ಸಿಯಸ್ ಕ್ಲೋಸೆಟ್’ (ILP – The Conscious Closet) ಪರಿಕಲ್ಪನೆಯಡಿ ಸುಸ್ಥಿರ ಫ್ಯಾಷನ್ ಪ್ರದರ್ಶನ ನಡೆಯಿತು.
ಸುಸ್ಥಿರತೆ, ಮರುಬಳಕೆ, ಸೃಜನಶೀಲತೆ ಹಾಗೂ ಜವಾಬ್ದಾರಿಯುತ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಕದಿಕೆ ಟ್ರಸ್ಟ್ ಉಡುಪಿಯ ಅಧ್ಯಕ್ಷೆ ಶ್ರೀಮತಿ ಮಮತಾ ರೈ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜವಳಿ ತ್ಯಾಜ್ಯ ಹಾಗೂ ಸಿಂಥೆಟಿಕ್ ನೂಲುಗಳಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಮಾಹಿತಿ ನೀಡಿ, ಬಟ್ಟೆಗಳನ್ನು ಜವಾಬ್ದಾರಿಯುತವಾಗಿ ಆಯ್ಕೆ ಹಾಗೂ ಮರುಬಳಕೆ ಮಾಡುವಂತೆ ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನೇತ್ರಾ ಹೆಚ್ ಅವರು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು AI ತಂತ್ರಜ್ಞಾನವನ್ನು ಬಳಸಿಕೊಂಡು ಸುಸ್ಥಿರ ಫ್ಯಾಷನ್ ಕುರಿತು ಸಂಶೋಧನೆ ಹಾಗೂ ಪ್ರಸ್ತುತಿಗಳನ್ನು ಸಿದ್ಧಪಡಿಸಿರುವುದನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ತರಗತಿಗಳ ವಿದ್ಯಾರ್ಥಿಗಳು ತಮ್ಮ ವಯೋಮಾನಕ್ಕೆ ವಿಭಿನ್ನ ಅನುಗುಣವಾಗಿ ವಿಷಯಗಳ ಮೂಲಕ ತಮ್ಮ ಕಲಿಕೆಯನ್ನು ಪ್ರಸ್ತುತಪಡಿಸಿವುದರೊಂದಿಗೆ ವಿದ್ಯಾರ್ಥಿಗಳಿಂದ ಇಕೋ-ರ್ಯಾಂಪ್ ವಾಕ್, ಸುಸ್ಥಿರ ಫ್ಯಾಷನ್ ಕುರಿತ ಯೋಜನೆಗಳ ಪ್ರದರ್ಶನ, ಆರೋಗ್ಯಕರ ಆಹಾರ ಮಳಿಗೆ, ಮರುಬಳಕೆಯ ವಸ್ತುಗಳ ಮಾರಾಟ ಹಾಗೂ ಹಳೆಯ ಬಟ್ಟೆಗಳ ದಾನ ಅಭಿಯಾನ ನಡೆಯಿತು. ಹಳೆಯ ಬಟ್ಟೆ ಮತ್ತು ಮರುಬಳಕೆಯ ವಸ್ತುಗಳಿಂದ ತಯಾರಿಸಲಾದ ಉಡುಪುಗಳ ರ್ಯಾಂಪ್ ವಾಕ್ ವಿಶೇಷ ಆಕರ್ಷಣೆಯಾಗಿತ್ತು.
ವಿದ್ಯಾರ್ಥಿಗಳ ಸೃಜನಶೀಲತೆ, ಪರಿಸರ ಕಾಳಜಿ ಮತ್ತು ಜವಾಬ್ದಾರಿಯುತ ಬಟ್ಟೆ ಬಳಕೆಯ ಮನೋಭಾವವನ್ನು ಬೆಳೆಸಿದ ಈ ಕಾರ್ಯಕ್ರಮವು “ತ್ಯಾಜ್ಯ ಕಡಿಮೆ ಮಾಡೋಣ, ಸಂಪನ್ಮೂಲಗಳನ್ನು ಮರುಬಳಕೆ ಮಾಡೋಣ, ಸುಸ್ಥಿರ ಭವಿಷ್ಯ ನಿರ್ಮಿಸೋಣ” ಎಂಬ ಸಂದೇಶವನ್ನು ಸಾರಿತು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಹರೀಶ್ ನಾಯಕ್, ಶಾಲಾ ಸಂಯೋಜಕರು, ಶಿಕ್ಷಕ ಶಿಕ್ಷಕೇತರ ವೃಂದದವರೊಂದಿಗೆ ವಿದ್ಯಾರ್ಥಿ ಪೋಷಕರು ಹಾಗೂ ಶಾಲಾಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.















