ಉಡುಪಿ: ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಸಾಮಾನ್ಯ ಸಭೆಯು ಸೆ.22ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪೆರ್ಡೂರಿನ ಬಂಟರ ಸಮುದಾಯ ಭವನದಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಾರಾಮ ಸೂಡ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಹಕಾರಿ ಸಂಘದ ನಿರ್ದೇಶಕರಾದ ರಾಜ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಶೆಟ್ಟಿ ಅವರು ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಶಾಂತಾರಾಮ ಸೂಡ ಕೆ. ಅವರು, ವರದಿ ಸಾಲಿನಲ್ಲಿ ಸಹಕಾರಿ ಸಂಘವು ರೂ. 30,88,412.68 ಲಾಭ ಗಳಿಸಿದೆ ಎಂದು ತಿಳಿಸಿದರು. ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಹಕಾರಿ ಸಂಘದ ಸದಸ್ಯರಿಗೆ ವೈದ್ಯಕೀಯ ವೆಚ್ಚದ ನೆರವಿಗಾಗಿ ರೂ. 1.50 ಲಕ್ಷ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೂ. 3 ಲಕ್ಷ ವಿದ್ಯಾರ್ಥಿವೇತನ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ ಸಾಯಿಶಾ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಶಿವರಾಮ ಶೆಟ್ಟಿ, ಮಹೇಶ್ ಕುಮಾರ್ ಶೆಟ್ಟಿ, ಸತೀಸ್ ಶೆಟ್ಟಿ, ಪ್ರಮೋದ್ ರೈ, ಶ್ರೀಮತಿ ಭಾರತಿ ಎಸ್. ಶೆಟ್ಟಿ, ಶ್ರೀಮತಿ ಸರಳಾ ಎಸ್. ಹೆಗ್ಡೆ, ಪ್ರಕಾಶ್ ಹೆಗ್ಡೆ, ದಿನೇಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಧರ್ ಕೆ. ಶೆಟ್ಟಿ ಅವರು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.















