ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೇ ತಿಂಗಳಲ್ಲಿ ಸತತ ಎರಡನೇ ಬಾರಿ ಅಕ್ಕಿ ದರ ಹೆಚ್ಚಳವಾಗಿದ್ದು, ಕಳೆದ ಒಂದು ವಾರದಿಂದ ಬಹುತೇಕ ಎಲ್ಲಾ ವಿಧದ ಅಕ್ಕಿಯ ಬೆಲೆ ಏರಿಕೆಯಾಗುತ್ತಿದೆ.
ಕೋಲಂ ಅಕ್ಕಿಯ ದರ ಕೆ.ಜಿಗೆ ₹75ರಿಂದ ₹100ಕ್ಕೆ ಏರಿಕೆಯಾಗಿದೆ. ಕೆಲವು ಅಕ್ಕಿ ತಳಿಗಳ ದರದಲ್ಲಿ ನಾಲ್ಕು ದಿನಗಳ ಅವಧಿಯಲ್ಲೇ ಕೆ.ಜಿಗೆ ಸುಮಾರು ₹20ರಷ್ಟು ಹೆಚ್ಚಳವಾಗಿದೆ. ಈ ದರ ಏರಿಕೆಗೆ ಸೂಕ್ತ ಇಳುವರಿ ಲಭ್ಯವಾಗದಿರುವುದು ಪ್ರಮುಖ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ಸೆಪ್ಟೆಂಬರ್ 15ರಂದೂ ರಾಜ್ಯದಲ್ಲಿ ಅಕ್ಕಿ ದರ ಏರಿಕೆಯಾಗಿತ್ತು. ಸಾಮಾನ್ಯ ಅಕ್ಕಿಯ ದರ ಕೆ.ಜಿಗೆ ₹5ರಿಂದ ₹10ರಷ್ಟು ಹಾಗೂ ಗುಣಮಟ್ಟದ ಅಕ್ಕಿಯ ದರ ₹10ರಿಂದ ₹20ರಷ್ಟು ಹೆಚ್ಚಳವಾಗಿತ್ತು. ಕ್ವಿಂಟಲ್ ಅಕ್ಕಿಯ ದರದಲ್ಲೂ ಸುಮಾರು ₹1,000ರಷ್ಟು ಏರಿಕೆಯಾಗಿತ್ತು. ಅಕ್ಕಿ ಚೀಲದ ದರ ಸಾಮಾನ್ಯ ಅಕ್ಕಿಗೆ ಸುಮಾರು ₹200 ಹಾಗೂ ಗುಣಮಟ್ಟದ ಅಕ್ಕಿಗೆ ₹250ರಿಂದ ₹300ರಷ್ಟು ಹೆಚ್ಚಳವಾಗಿತ್ತು.
ಮಳೆ ಕೊರತೆ, ಇಳುವರಿ ಕುಸಿತದ ಪರಿಣಾಮ
ಈ ವರ್ಷ ಹಲವು ಪ್ರದೇಶಗಳಲ್ಲಿ ಮಳೆ ಕೊರತೆ ಹಾಗೂ ನೀರಿನ ಸಮಸ್ಯೆಯಿಂದ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರಿದೆ. ರೈತರು ಬೆಳೆದ ಬೆಳೆಗಳು ಸೂಕ್ತ ಸಮಯಕ್ಕೆ ಕಟಾವಿಗೆ ಬಾರದಿರುವುದು ಸೇರಿದಂತೆ ಹಲವು ಕಾರಣಗಳಿಂದ ಅಕ್ಕಿಯ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಇದರ ಪರಿಣಾಮ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಅಕ್ಕಿ ದರ ಹೆಚ್ಚಳ ಹೆಚ್ಚುವರಿ ಹೊರೆ ತಂದಿದೆ.
ಪ್ರಮುಖ ಅಕ್ಕಿ ತಳಿಗಳ ದರ
| ಅಕ್ಕಿ ತಳಿ | ಹಿಂದಿನ ದರ (ಕೆ.ಜಿ.) | ಹೊಸ ದರ (ಕೆ.ಜಿ.) |
| ಕೋಲಂ | ₹75 | ₹100 |
| ಸೋನಾಮಸೂರಿ | ₹68 | ₹82 |
| ಜೀರಾ ಸಾಂಬ | ₹180 | ₹200* |
| ಸ್ಟೀಮ್ ಅಕ್ಕಿ | ₹68 | ₹75 |















