ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಪ್ರಯುಕ್ತ ಮಾರ್ಗ ಬದಲಾವಣೆ

ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಎದುರು ಸಾರ್ವಜನಿಕ ಗಣೇಶೋತ್ಸವ ಸೆ. 14 ರಿಂದ 18 ರ ವರೆಗೆ ನಡೆಯಲಿದ್ದು, ಸೆ. 18 ರಂದು ಸದ್ರಿ ಗಣೇಶಮೂರ್ತಿಯ ವಿಸರ್ಜನೆಯು ನಡೆಯಲಿರುತ್ತದೆ.

ಮೆರವಣಿಗೆಯು 169 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸದ್ರಿ ಸಂಚಾರ ಅಡಚಣೆ ನಿಯಂತ್ರಣ ಉದ್ದೇಶದಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ 169 (ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಸೆ. 18 ರ ಸಂಜೆ 4 ಗಂಟೆಯಿoದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.

ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ-ಹರಿಖಂಡಿಗೆ-ಬೈರoಪಳ್ಳಿ-ಪರ್ಡೂರು ಮೇಲ್ಪೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ, ಜಜೆ, ಕುಕ್ಕೆಹಳ್ಳಿ ಪೇತ್ರಿ ಮಾರ್ಗವಾಗಿ ಹೆಬ್ರಿ ಆಗುಂಬೆಗೆ ಸಂಚರಿಸಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಆಗುಂಬೆ- ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪೇಟೆ-ಬೈರಂಪಳ್ಳಿ-ಹರಿಖoಡಿಗೆ-ಕೋಟ್ನಾಕಟ್ಟೆ-ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು.

ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ-ಬ್ರಹ್ಮಾವರ ಕಡೆಯ ವಾಹನಗಳಿಗೆ ಪೆರ್ಡೂರು ಮೇಲ್ಪೇಟೆಯ ಆರ್.ಎಸ್.ಎಸ್ ಬ್ಯಾಂಕ್ ಬಳಿ ಇರುವ ಅಲಂಗಾರು ರಸ್ತೆಯ ಮಾರ್ಗವಾಗಿ ಕರ್ಜೆ, ಪೇತ್ರಿ, ಬ್ರಹ್ಮಾವರ ಕಡೆ ಸಂಚರಿಸಬೇಕು.

ಸೆ. 18 ರ ಸಂಜೆ 4 ಗಂಟೆಯಿoದ ರಾತ್ರಿ 10 ಗಂಟೆಯವರೆಗೆ ಪೆರ್ಡೂರು ಕೆಳಪೇಟೆಯಿಂದ-ಮೇಲ್ಪೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರ ಮುಕ್ತಗೊಳಿಸಿದೆ.

ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221, 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.