ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ, ನೃತ್ಯ ಕಲಾಸಿಂಧು ಕೀರ್ತಿಶೇಷ ರಾಧಾಕೃಷ್ಣ ತಂತ್ರಿ ಅವರ 91ನೇ ಜನ್ಮದಿನದ ಸ್ಮರಣಾರ್ಥವಾಗಿ ಸೆ.19ರಂದು ‘ನೃತ್ಯಾಭಿಷೇಕಂ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನೃತ್ಯ ನಿರ್ದೇಶಕಿ, ನೃತ್ಯ ವಿದುಷಿ ವೀಣಾ ಮುರಳೀಧರ ಸಾಮಗ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಸಂಜೆ 5.30ಕ್ಕೆ ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಧಾಕೃಷ್ಣ ತಂತ್ರಿಗಳ ಶಿಷ್ಯವರ್ಗದವರು ನೃತ್ಯದ ಮೂಲಕ ಗುರುನಮನ ಸಲ್ಲಿಸಲಿದ್ದಾರೆ ಎಂದರು.
ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ವಿದ್ವಾನ್ ಕೆ. ಚಂದ್ರಶೇಖರ್ ನಾವಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ‘ನವರಸ ನೃತ್ಯದಾಮ’ದ ಹಿರಿಯ ಶಿಷ್ಯೆ ವಿದುಷಿ ಸುಷ್ಮಾ ಕಾಮತ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಾಗೆಯೇ ಊರು, ಪರವೂರಿನಿಂದ 40ಕ್ಕೂ ಅಧಿಕ ಶಿಷ್ಯರು ಭಾಗವಹಿಸಲಿದ್ದು, ‘ನೃತ್ಯಾಭಿಷೇಕಂ’ ಮೂಲಕ ಗುರುಗಳಿಗೆ ನಮನ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೀಲಾವರ ವಿಶ್ವ-ಯಕ್ಷ ನೃತ್ಯ ಕಲಾನಿಕೇತನದ ವಿದ್ವಾನ್ ವಿಶ್ವರೂಪ ಮಧ್ಯಸ್ಥ ಹಾಗೂ ಬಿ.ಎಂ. ಪವನ್ ರಾಜ್ ಸಾಮಗ ಉಪಸ್ಥಿತರಿದ್ದರು.















