ನೀರನ್ನು ಸಂಗ್ರಹಿಸುವ ಅಣೆಕಟ್ಟುಗಳಿಂದ ಹಿಡಿದು ಪ್ರವಾಹ ನಿಯಂತ್ರಣ ವ್ಯವಸ್ಥೆಯವರೆಗೆ, ಕೈಗಾರಿಕೆಗಳಿಂದ ಶಿಕ್ಷಣದವರೆಗೆ—ಭಾರತದ ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ತಮ್ಮ ದೂರದೃಷ್ಟಿಯ ಹೆಜ್ಜೆಗುರುತು ಮೂಡಿಸಿದ ಮಹಾನ್ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ದೇಶಾದ್ಯಂತ ‘ಇಂಜಿನಿಯರ್ಸ್ ಡೇ’ ಆಚರಿಸಲಾಗುತ್ತದೆ.
ಆಧುನಿಕ ಭಾರತದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಕೊಡುಗೆಯನ್ನು ಸ್ಮರಿಸುವ ಈ ದಿನವು ಕೇವಲ ವೃತ್ತಿಯೊಂದರ ಸಂಭ್ರಮವಲ್ಲ; ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನ, ಕೌಶಲ್ಯ ಮತ್ತು ಶ್ರಮವನ್ನು ಸಮರ್ಪಿಸಿದ ಇಂಜಿನಿಯರ್‌ಗಳಿಗೆ ಗೌರವ ಸಲ್ಲಿಸುವ ದಿನವೂ ಹೌದು.
ವಿಶ್ವೇಶ್ವರಯ್ಯ ಅವರ ಹೆಸರಿನಲ್ಲೇ ಇಂಜಿನಿಯರ್ಸ್ ಡೇ

ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುವ ಉದ್ದೇಶದಿಂದ ಭಾರತದಲ್ಲಿ 1968ರಿಂದ ಸೆಪ್ಟೆಂಬರ್ 15ರಂದು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಅವರ ಸಾಧನೆಗಳು ಇಂದಿನ ಇಂಜಿನಿಯರಿಂಗ್ ಕ್ಷೇತ್ರದ ಹಲವು ತಲೆಮಾರುಗಳಿಗೆ ಪ್ರೇರಣೆಯಾಗಿವೆ.
ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲಿಯೂ ಇದೇ ದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತದೆ.
ಮುದ್ದೇನಹಳ್ಳಿಯಿಂದ ರಾಷ್ಟ್ರಮಟ್ಟದ ಸಾಧನೆ.

ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು 1861ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರೂ ಶಿಕ್ಷಣದ ಮೇಲಿನ ಆಸಕ್ತಿಯನ್ನು ಅವರು ಕೈಬಿಡಲಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದರು. ಬಳಿಕ ಪುಣೆಯ ಸೈನ್ಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದರು. 1883ರ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಗಳಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.
ಶಿಕ್ಷಣ ಪೂರ್ಣಗೊಂಡ ಬಳಿಕ ಬಾಂಬೆ ಸರ್ಕಾರದ ಇಂಜಿನಿಯರಿಂಗ್ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು, ತಮ್ಮ ಕಾರ್ಯಕ್ಷಮತೆ ಮತ್ತು ಹೊಸ ಚಿಂತನೆಗಳಿಂದ ಶೀಘ್ರದಲ್ಲೇ ಗಮನ ಸೆಳೆದರು.



ಅಣೆಕಟ್ಟು, ಜಲಾಶಯ, ಪ್ರವಾಹ ನಿಯಂತ್ರಣ
ಭಾರತದ ನೀರಾವರಿ ಮತ್ತು ಜಲಸಂಪನ್ಮೂಲ ಅಭಿವೃದ್ಧಿಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಮೈಸೂರಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು ಯೋಜನೆಯೊಂದಿಗೆ ಅವರ ಹೆಸರು ಅವಿನಾಭಾವವಾಗಿ ಜೋಡಿಸಿಕೊಂಡಿದೆ.
ಹೈದರಾಬಾದ್ ನಗರವನ್ನು ಪ್ರವಾಹದಿಂದ ರಕ್ಷಿಸುವ ವ್ಯವಸ್ಥೆಯ ರೂಪುರೇಷೆ ರೂಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ನೀರಿನ ಹರಿವು ಮತ್ತು ಸಂಗ್ರಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ಅವರ ಚಿಂತನೆಗಳು ಆ ಕಾಲಕ್ಕಿಂತಲೂ ಮುಂದುವರಿದಿದ್ದವು.
ಪ್ರವಾಹ ಗೇಟ್‌ಗೆ ಪೇಟೆಂಟ್!


ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ಸೃಜನಶೀಲತೆಗೆ ಸಾಕ್ಷಿಯಾಗಿರುವ ಪ್ರಮುಖ ಸಾಧನೆಗಳಲ್ಲಿ ಸ್ವಯಂಚಾಲಿತ ನೀರು ನಿಯಂತ್ರಣ ಗೇಟ್‌ಗಳ ವಿನ್ಯಾಸವೂ ಒಂದು. 1903ರಲ್ಲಿ ಪುಣೆಯ ಖಡಕ್‌ವಾಸ್ಲಾ ಜಲಾಶಯದಲ್ಲಿ ಅಳವಡಿಸಲಾದ ಸ್ವಯಂಚಾಲಿತ ಪ್ರವಾಹ ಗೇಟ್‌ಗಳ ವಿನ್ಯಾಸಕ್ಕೆ ಅವರು ಪೇಟೆಂಟ್ ಪಡೆದಿದ್ದರು.
ನೀರಿನ ಮಟ್ಟ ಹೆಚ್ಚಾದಾಗ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ ವ್ಯವಸ್ಥೆ ಅವರ ತಾಂತ್ರಿಕ ದೂರದೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ.


ಇಂಜಿನಿಯರ್ ಮಾತ್ರವಲ್ಲ, ರಾಷ್ಟ್ರ ನಿರ್ಮಾಪಕ
ವಿಶ್ವೇಶ್ವರಯ್ಯ ಅವರು ಕೇವಲ ತಾಂತ್ರಿಕ ತಜ್ಞರಾಗಿರಲಿಲ್ಲ. ಆಡಳಿತ, ಕೈಗಾರಿಕೆ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದರು.

1912ರಿಂದ 1918ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ ಅವರು, ಕೈಗಾರಿಕೆಗಳ ಸ್ಥಾಪನೆ, ಶಿಕ್ಷಣದ ವಿಸ್ತರಣೆ, ನೀರಾವರಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳಿಗೆ ಕಾರಣರಾದರು.
ಅವರ ದೂರದೃಷ್ಟಿಯಿಂದಲೇ ಮೈಸೂರು ಸಂಸ್ಥಾನವು ಆಧುನಿಕ ಅಭಿವೃದ್ಧಿಯತ್ತ ಮುನ್ನಡೆಯಿತು ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ.


‘ಭಾರತ ರತ್ನ’ ಗೌರವ
ದೇಶಕ್ಕೆ ನೀಡಿದ ಅಪೂರ್ವ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1955ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತು. ಬ್ರಿಟಿಷ್ ಸರ್ಕಾರದಿಂದಲೂ ಅವರಿಗೆ ನೈಟ್‌ಹುಡ್ ಗೌರವ ದೊರೆತಿತ್ತು.
ಅವರ ಸರಳತೆ, ಶಿಸ್ತು, ಸಮಯಪಾಲನೆ ಮತ್ತು ನಿರಂತರ ಪರಿಶ್ರಮ ಇಂದಿಗೂ ಯುವಜನರಿಗೆ ಮಾದರಿಯಾಗಿದೆ.
ಪ್ರಧಾನಿಯಿಂದಲೂ ಸ್ಮರಣೆ



ಇಂಜಿನಿಯರ್ಸ್ ಡೇ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಾರೆ. ಸಂಶೋಧನೆ, ನವೀನತೆ ಮತ್ತು ದೇಶ ಸೇವೆಯಲ್ಲಿ ವಿಶ್ವೇಶ್ವರಯ್ಯ ಅವರ ಜೀವನ ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ಮೋದಿ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ವಿಶ್ವೇಶ್ವರಯ್ಯ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದರು.



ಇಂದಿನ ಇಂಜಿನಿಯರ್‌ಗಳಿಗೆ ಅವರ ಬದುಕೇ ಪಾಠ
ಒಂದು ಕಾಲದಲ್ಲಿ ಸೀಮಿತ ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ನಡುವೆಯೇ ಅಸಾಧ್ಯವೆನಿಸಿದ್ದ ಯೋಜನೆಗಳಿಗೆ ಪರಿಹಾರ ಕಂಡುಕೊಂಡ ವಿಶ್ವೇಶ್ವರಯ್ಯ ಅವರ ಜೀವನ, ‘ಸಮಸ್ಯೆ ಕಂಡಾಗ ಪರಿಹಾರ ಹುಡುಕಬೇಕು’ ಎಂಬ ಸಂದೇಶವನ್ನು ನೀಡುತ್ತದೆ.
ದೇಶದ ಸೇತುವೆ, ರಸ್ತೆ, ಅಣೆಕಟ್ಟು, ರೈಲು, ಕೈಗಾರಿಕೆ, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿಯ ಹೆಜ್ಜೆಯ ಹಿಂದೆಯೂ ಇಂಜಿನಿಯರ್‌ಗಳ ಕೊಡುಗೆ ಇದೆ. ಆ ಎಲ್ಲಾ ಇಂಜಿನಿಯರ್‌ಗಳ ಪರಿಶ್ರಮವನ್ನು ಗೌರವಿಸುವ ದಿನವೇ ಇಂಜಿನಿಯರ್ಸ್ ಡೇ.


ವಿಶ್ವೇಶ್ವರಯ್ಯ ಅವರ ಕನಸಿನ ಅಭಿವೃದ್ಧಿಶೀಲ ಭಾರತವನ್ನು ನಿರ್ಮಿಸುವ ಜವಾಬ್ದಾರಿ ಇಂದಿನ ಇಂಜಿನಿಯರ್‌ಗಳ ಹೆಗಲ ಮೇಲೂ ಇದೆ. ಅವರ ದೂರದೃಷ್ಟಿ ಮತ್ತು ಕಾರ್ಯಶೀಲತೆಯನ್ನು ಸ್ಮರಿಸುತ್ತಾ, ದೇಶ ನಿರ್ಮಾಣದಲ್ಲಿ ತೊಡಗಿರುವ ಪ್ರತಿಯೊಬ್ಬ ಇಂಜಿನಿಯರ್‌ಗೂ ಇಂದು ಗೌರವದ ನಮನ.






















