ಉಡುಪಿ: ಮಾತೆ ಮೇರಿಯ ಜನ್ಮೋತ್ಸವದ ಸಂಭ್ರಮ; ತೆನೆ ಪೂಜೆಯೊಂದಿಗೆ ಕರಾವಳಿಯಲ್ಲಿ ಮೊಂತಿ ಹಬ್ಬ

ಉಡುಪಿ: ಮಾತೆ ಮೇರಿಯ ಜನ್ಮದಿನ ಹಾಗೂ ತೆನೆ ಹಬ್ಬವನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು.

ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆಗಳು ನಡೆದರೆ, ಮನೆ ಮನೆಗಳಲ್ಲಿ ಹೊಸ ಅಕ್ಕಿಯ ಹಾಲು ಪಾಯಸ ಮತ್ತು ಸಸ್ಯಾಹಾರಿ ಭೋಜನದೊಂದಿಗೆ ಮೊಂತಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುತ್ತಿದ್ದ ಪುಷ್ಪಾರ್ಚನೆಯ ವೈಭವ ಮಂಗಳವಾರ ಉತ್ತುಂಗಕ್ಕೇರಿತು. ಚರ್ಚ್‌ಗಳ ಗ್ರೊಟ್ಟೊ ಮುಂಭಾಗದಲ್ಲಿ ಇರಿಸಲಾಗಿದ್ದ ಮಾತೆ ಮೇರಿಯ ಪ್ರತಿಮೆಗೆ ನೂರಾರು ಮಕ್ಕಳು ಹಾಗೂ ಭಕ್ತರು ಬಣ್ಣಬಣ್ಣದ ಹೂವು ಮತ್ತು ಪುಷ್ಪದಳಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು. ಮಾತೆಯ ಮೇಲಿನ ಗೌರವ, ಭಕ್ತಿ ಹಾಗೂ ಹೆಣ್ಮಕ್ಕಳ ರಕ್ಷಣೆಯ ಆಶಯ ಈ ಆಚರಣೆಯಲ್ಲಿ ಅನಾವರಣಗೊಂಡಿತು.

ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ತೆನೆ ಪೂಜೆ ಮತ್ತು ಪವಿತ್ರ ಬಲಿಪೂಜೆಗಳು ನೆರವೇರಿದವು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಬ್ಬದ ಸಂದೇಶ ನೀಡಿದ ಅವರು, ಮೊಂತಿ ಹಬ್ಬವು ಧಾರ್ಮಿಕ ಮಹತ್ವ ಹೊಂದಿರುವುದರ ಜತೆಗೆ ಕೃತಜ್ಞತೆ, ಕುಟುಂಬ, ಹಂಚಿಕೆ ಹಾಗೂ ಪರಸ್ಪರ ಕಾಳಜಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದರು.

ಕುಟುಂಬದ ಸದಸ್ಯರು ಪರಿಪೂರ್ಣರಾಗಿರುವುದರಿಂದ ಕುಟುಂಬ ಬಲಿಷ್ಠವಾಗುವುದಿಲ್ಲ. ಪರಸ್ಪರ ಅರ್ಥಮಾಡಿಕೊಳ್ಳುವುದು, ತಪ್ಪುಗಳನ್ನು ಕ್ಷಮಿಸುವುದು, ಸಂಕಷ್ಟದ ಸಂದರ್ಭಗಳಲ್ಲಿ ಬೆಂಬಲವಾಗಿ ನಿಲ್ಲುವುದು ಹಾಗೂ ಸಂತೋಷವನ್ನು ಹಂಚಿಕೊಳ್ಳುವ ಮನೋಭಾವದಿಂದ ಕುಟುಂಬ ಗಟ್ಟಿಯಾಗುತ್ತದೆ. ಕ್ಷಮೆ ಸಂಬಂಧಗಳನ್ನು ಗುಣಪಡಿಸಿದರೆ, ಮೆಚ್ಚುಗೆ ಮತ್ತು ಪ್ರೋತ್ಸಾಹ ಅವುಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.

ಮೊಂತಿ ಹಬ್ಬವು ಭೂಮಿ ಮತ್ತು ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಹಾಗೂ ರೈತರ ಪರಿಶ್ರಮದ ಸಂಕೇತವಾಗಿದ್ದು, ಆಹಾರಕ್ಕಾಗಿ ಕೃತಜ್ಞರಾಗಿರುವುದರೊಂದಿಗೆ ರೈತರ ದುಡಿಮೆಯನ್ನು ಗೌರವಿಸಬೇಕು ಮತ್ತು ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಬೇಕು ಎಂದು ಕರೆ ನೀಡಿದರು.

ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನ ಈ ಹಬ್ಬಕ್ಕೆ ಧಾರ್ಮಿಕ ಅರ್ಥವನ್ನು ನೀಡಿದರೂ, ಮೊಂತಿ ಹಬ್ಬ ಸಾರುವ ಕೃತಜ್ಞತೆ, ಹಂಚಿಕೆ, ಹಿರಿಯರಿಗೆ ಗೌರವ, ಕುಟುಂಬ ಪ್ರೀತಿ, ಕ್ಷಮೆ, ಪರಸ್ಪರ ಕಾಳಜಿ ಹಾಗೂ ಪ್ರಕೃತಿಯ ಬಗೆಗಿನ ಗೌರವದಂತಹ ಮೌಲ್ಯಗಳು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಸ್ಪರ್ಶಿಸುತ್ತವೆ ಎಂದು ತಿಳಿಸಿದರು.

ವಿವಿಧ ಚರ್ಚ್‌ಗಳಲ್ಲಿ ಆಚರಣೆಉಡುಪಿ ಶೋಕಮಾತಾ ದೇವಾಲಯದಲ್ಲಿ ಧರ್ಮಗುರು ವಂ. ಡೆನಿಸ್ ಡೆಸಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ವಂ. ಪ್ರವೀಣ್ ಲಿಯೋ ಹಾಗೂ ವಂ. ವಿಜಯ್ ಡಿಸೋಜಾ ಉಪಸ್ಥಿತರಿದ್ದರು.

ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚ್‌ನ ರೆಕ್ಟರ್ ಮೊನ್ಸಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ, ಕುಂದಾಪುರದ ಹೋಲಿ ರೋಜರಿ ಚರ್ಚ್‌ನಲ್ಲಿ ವಂ. ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ. ಚಾರ್ಲ್ಸ್ ಮಿನೇಜಸ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ತೆನೆ ಹಬ್ಬ ಮತ್ತು ಮಾತೆ ಮೇರಿಯ ಜನ್ಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಮನೆ ಮನೆಗಳಲ್ಲಿ ಹೊಸ ಅಕ್ಕಿಯ ಸಿಹಿಮಾತೆ ಮೇರಿಯ ಜನ್ಮದಿನದಂದೇ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುವ ತೆನೆ ಹಬ್ಬ ಮನೆ ಮನೆಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಮುಂಜಾನೆಯೇ ಭತ್ತದ ತೆನೆ ಹಾಗೂ ಕಬ್ಬನ್ನು ಗುರಿಕಾರರು ಮೆರವಣಿಗೆಯಲ್ಲಿ ಚರ್ಚ್‌ಗೆ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನೆರವೇರಿಸಿ ಭಕ್ತರಿಗೆ ವಿತರಿಸಿದರು.

ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಭಕ್ತರು ದೇವರ ಪೀಠದ ಮೇಲೆ ಇರಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊಸ ಭತ್ತದ ಕಾಳಿನಿಂದ ತಯಾರಿಸಿದ ಅಕ್ಕಿ, ಹಾಲು ಮತ್ತು ತೆಂಗಿನ ಹಾಲಿನಿಂದ ಪಾಯಸ ಸೇರಿದಂತೆ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಿ ಕುಟುಂಬದ ಸದಸ್ಯರು ಒಟ್ಟಾಗಿ ಸವಿದರು. ಸಂಪೂರ್ಣ ಸಸ್ಯಾಹಾರಿ ಭೋಜನ ಮೊಂತಿ ಹಬ್ಬದ ವಿಶೇಷತೆಯಾಗಿತ್ತು.