ಉಡುಪಿ: ಕೃಷ್ಣಭಕ್ತಿ ಮತ್ತು ಜಾನಪದ ಕಲೆಯ ಅಪೂರ್ವ ಸಂಗಮಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಎರಡು ದಿನಗಳ ಕಾಲ ರಥಬೀದಿ ಸಹಿತ ನಗರದ ಮೂಲೆ ಮೂಲೆಗಳಲ್ಲಿ ಕರಾವಳಿಯ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, ಇಡೀ ನಗರವೇ ಮುಕ್ತ ರಂಗಮಂದಿರವಾಗಿ ಪರಿವರ್ತನೆಯಾಗಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಈ ಬಾರಿ ಬರೋಬ್ಬರಿ 2.50 ಲಕ್ಷ ಚಕ್ಕುಲಿ ಹಾಗೂ ವಿವಿಧ ಬಗೆಯ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಒಂದೂವರೆ ಲಕ್ಷ ಚಕ್ಕುಲಿ ವಿತರಿಸಲು ತಯಾರಿ ನಡೆಯುತ್ತಿದೆ. ಜತೆಗೆ ತಲಾ 50 ಸಾವಿರದಂತೆ ಐದು ಬಗೆಯ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಗುಂಡಿಟ್ಟು, ಎಳ್ಳುಂಡೆ, ಅರಳುಂಡೆ, ನೆಲಗಡಲೆ ಉಂಡೆ ಹಾಗೂ ರವಾ ಲಾಡು ಪ್ರಸಾದದ ವಿಶೇಷಗಳಾಗಿವೆ.

ಸುಮಾರು 75 ಮಂದಿ ಬಾಣಸಿಗರು ಪ್ರಸಾದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2ರಿಂದ ತಯಾರಿ ಆರಂಭಗೊಂಡಿದ್ದು, ಮೂರು ದಿನಗಳಲ್ಲಿ ಚಕ್ಕುಲಿ ಮತ್ತು ವಿವಿಧ ಉಂಡೆಗಳ ತಯಾರಿಕೆ ಪೂರ್ಣಗೊಳ್ಳಲಿದೆ.ಒಂದೂವರೆ ಲಕ್ಷ ಚಕ್ಕುಲಿ ತಯಾರಿಕೆಗೆ 12 ಕ್ವಿಂಟಾಲ್ ಹಿಟ್ಟು ಅಗತ್ಯವಿದೆ.

ಐದು ಬಗೆಯ ಉಂಡೆಗಳನ್ನು ತಲಾ 50 ಸಾವಿರದ ಸಂಖ್ಯೆಯಲ್ಲಿ ತಯಾರಿಸಲು ತಲಾ ಮೂರು ಕ್ವಿಂಟಾಲ್ನಂತೆ ಕಚ್ಚಾ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಸುಮಾರು 20 ಕ್ವಿಂಟಾಲ್ ಬೆಲ್ಲ ಹಾಗೂ 7 ಕ್ವಿಂಟಾಲ್ ಸಕ್ಕರೆ ಬಳಕೆಯಾಗಲಿದೆ.

ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಮಾತ್ರವಲ್ಲದೆ ಸ್ಥಳೀಯ ವಿವಿಧ ಶಾಲೆಗಳ ಮಕ್ಕಳಿಗೂ ಜನ್ಮಾಷ್ಟಮಿ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಕೃಷ್ಣ ಮಠದ ಕೊಟ್ಟಾರಿಗಳಾದ ರಾಮಚಂದ್ರ ಕೊಡಂಚ ಹಾಗೂ ಗೋವಿಂದರಾಜ್ ತಿಳಿಸಿದ್ದಾರೆ.

ಕೃಷ್ಣನ ಜನ್ಮದಿನ ಮತ್ತು ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ಜನಸಾಗರವೇ ಉಡುಪಿ ಕ್ಷೇತ್ರಕ್ಕೆ ಹರಿದುಬರುವ ನಿರೀಕ್ಷೆಯಿದ್ದು, ಧಾರ್ಮಿಕ ಆಚರಣೆಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾವಳಿಯ ಜಾನಪದ ವೈಭವ ಉತ್ಸವಕ್ಕೆ ವಿಶೇಷ ಮೆರುಗು ನೀಡಲಿವೆ.















