ಉಡುಪಿ: ಕೃಷ್ಣನ ಹುಟ್ಟುಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೃಷ್ಣನ ನಾಡು ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ವೈಭವಕ್ಕೆ ಸಜ್ಜಾಗುತ್ತಿದೆ. ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗುರ್ಜಿ ಕಂಬಗಳ ಅಳವಡಿಕೆ, ಗೋಪುರ ನಿರ್ಮಾಣ ಸೇರಿದಂತೆ ವಿವಿಧ ಅಲಂಕಾರ ಕಾರ್ಯಗಳು ಭರದಿಂದ ಸಾಗುತ್ತಿವೆ.
ಶೀರೂರು ಮಠದ ಪರ್ಯಾಯದಲ್ಲಿ ನಡೆಯಲಿರುವ ಈ ಬಾರಿಯ ಕೃಷ್ಣೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದೆ.
ಹುಲಿವೇಷ ಸ್ಪರ್ಧೆ, ಮಲ್ಲಯುದ್ಧ ಪ್ರದರ್ಶನ, ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯಲಿವೆ.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಶ್ರೀಕೃಷ್ಣ ಮಠದ ವತಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ.
ಎರಡು ದಿನ ಹುಲಿವೇಷ ಸ್ಪರ್ಧೆ:
ಉಡುಪಿಯ ಕೃಷ್ಣಾಷ್ಟಮಿ ಆಚರಣೆಯ ಅವಿಭಾಜ್ಯ ಅಂಗವಾಗಿರುವ ಹುಲಿವೇಷಕ್ಕೆ ಈ ಬಾರಿಯೂ ವಿಶೇಷ ಆದ್ಯತೆ ನೀಡಲಾಗಿದೆ. ಎರಡು ದಿನಗಳ ಕಾಲ ಹುಲಿವೇಷ ಸ್ಪರ್ಧೆ ಆಯೋಜಿಸಲಾಗಿದ್ದು, ಸೆ. 4ರಂದು ಬೆಳಗ್ಗೆಯಿಂದ ಸಂಜೆವರೆಗೆ ರಾಜಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.
ಸೆ. 5ರಂದು ಮಧ್ಯಾಹ್ನದ ಬಳಿಕ ರಥಬೀದಿಯಲ್ಲಿ ವಿಟ್ಠಲಪಿಂಡಿ ವೈಭವ ನಡೆಯಲಿದ್ದು, ಈ ವೇಳೆ ಹೆಚ್ಚಿನ ಜನದಟ್ಟಣೆ ಉಂಟಾಗುವುದರಿಂದ ಎಲ್ಲರಿಗೂ ಹುಲಿವೇಷ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ವೀಕ್ಷಣೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
ಮಲ್ಲಯುದ್ಧಕ್ಕೂ ಅವಕಾಶ:ಈ ಬಾರಿಯ ಅಷ್ಟಮಿ ಆಚರಣೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ. ಶ್ರೀಕೃಷ್ಣನು ಮಲ್ಲಯುದ್ಧದಲ್ಲಿ ಪರಿಣತನಾಗಿದ್ದನೆಂದು ಹರಿವಂಶ ಪುರಾಣ ಹಾಗೂ ಭಾಗವತದಲ್ಲಿ ಉಲ್ಲೇಖವಿದೆ. ಕಂಸನ ಸಂಹಾರಕ್ಕೂ ಮುನ್ನ ಚಾಣೂರ, ಮುಷ್ಟಿಕ ಸೇರಿದಂತೆ ಹಲವು ಮಲ್ಲರೊಂದಿಗೆ ಕೃಷ್ಣನು ಸೆಣಸಾಡಿದ್ದ ಹಿನ್ನೆಲೆಯಲ್ಲೇ ಮಲ್ಲಯುದ್ಧ ಪ್ರದರ್ಶನ ಆಯೋಜಿಸಲಾಗಿದೆ.
ಮೈಸೂರು ಹಾಗೂ ಮಂಡ್ಯ ಭಾಗದ ಪ್ರಸಿದ್ಧ ಜಟ್ಟಿಗಳಿಂದ ವಿಶೇಷ ಮಲ್ಲಯುದ್ಧ ಪ್ರದರ್ಶನ ನಡೆಯಲಿದ್ದು, ಕೃಷ್ಣನಿಗೆ ಪ್ರಿಯವಾದ ಈ ಕಲೆಯನ್ನು ಭಕ್ತರು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಹತ್ತು ದಿನ ಸಾಂಸ್ಕೃತಿಕ ವೈಭವ:ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥರ ಆಶಯದಂತೆ ಈ ಬಾರಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಸುಮಾರು ಹತ್ತು ದಿನಗಳ ಕಾಲ ರಾಜಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಕಲ್ಕತ್ತಾದ ಖ್ಯಾತ ಗಾಯಕಿ ಕೌಶಿಕಿ ಚಕ್ರವರ್ತಿ ಅವರ ವಿಶೇಷ ಸಂಗೀತ ಕಾರ್ಯಕ್ರಮವೂ ಈ ಬಾರಿಯ ಕೃಷ್ಣೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಒಂದೂವರೆ ಲಕ್ಷ ಪ್ರಸಾದ:
ಕೃಷ್ಣೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಉಂಡೆ, ಚಕ್ಕುಲಿ ಸೇರಿದಂತೆ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಪ್ರಸಾದ ತಯಾರಿಸಲು ಸಿದ್ಧತೆ ನಡೆಸಲಾಗಿದೆ.
ಭಕ್ತರಿಗೆ ಅನುಕೂಲವಾಗುವಂತೆ ಪ್ಯಾಕೆಟ್ಗಳ ಮೂಲಕವೂ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಹಾಲಿನ ಪಾಯಸ ಸೇರಿದಂತೆ ವಿವಿಧ ಬಗೆಯ ಪ್ರಸಾದಗಳನ್ನು ವಿತರಿಸಲು ಬಾಣಸಿಗರು ಹಾಗೂ ಅಡುಗೆ ಸಿಬ್ಬಂದಿಯಿಂದ ಸಿದ್ಧತೆ ನಡೆಯುತ್ತಿದೆ.
ಶ್ರೀಕೃಷ್ಣನಿಗೆ ವಿಶೇಷ ಪುಷ್ಪಾಲಂಕಾರ, ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಭದ್ರತಾ ಸಿಬ್ಬಂದಿಯ ಸಹಕಾರದೊಂದಿಗೆ ಭದ್ರತಾ ವ್ಯವಸ್ಥೆ ರೂಪಿಸಲಾಗುತ್ತಿದ್ದು, ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ, ಧಾರ್ಮಿಕ ಆಚರಣೆಯ ಜತೆಗೆ ಹುಲಿವೇಷ, ಮಲ್ಲಯುದ್ಧ, ಸಂಗೀತ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ಬಾರಿಯ ಉಡುಪಿಯ ಕೃಷ್ಣೋತ್ಸವ ಮತ್ತಷ್ಟು ವೈಭವದಿಂದ ನಡೆಯಲು ಸಜ್ಜಾಗಿದೆ. ಕೃಷ್ಣನ ದರ್ಶನ ಹಾಗೂ ವಿಟ್ಲಪಿಂಡಿ ವೈಭವಕ್ಕಾಗಿ ಆಗಮಿಸುವ ಸಾವಿರಾರು ಭಕ್ತರ ಸ್ವಾಗತಕ್ಕೆ ಕೃಷ್ಣನಗರಿ ಕಾದು ಕುಳಿತಿದೆ.















